ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ಹೊಂದಿದ ಆರೋಪದ ಹಿನ್ನೆಲೆ ಮಾರುತಿ ಸಹಕಾರಿ ಸಂಘದ ಬ್ಯಾಂಕ್ ಸಿಇಓ, ಹಾಗೂ ಕೋಲ್–ಶಿರ್ಸಿ ಗ್ರೂಪ್‌ನ ಶಿರಸಿ ಸೌಹಾರ್ದ ಬ್ಯಾಂಕ್ ಸಿಇಓ ಆಗಿರುವ ಯಶವಂತ್ ಮಾಲ್ವಿ ಅವರ ಮನೆ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ.

ಹಳಿಯಾಳದಲ್ಲಿ ಎರಡು ಕಡೆ ಹಾಗೂ ಸಿದ್ದಾಪುರದಲ್ಲಿ ಒಂದು ಕಡೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಸಿದ್ದಾಪುರದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ದಾಳಿ ನಡೆಯುತ್ತಿದ್ದು, ದಾಖಲೆ ಪರಿಶೀಲನೆ ಹಾಗೂ ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆಯುತ್ತಿದೆ.

ಉಡುಪಿ, ಮಂಗಳೂರು ಹಾಗೂ ಕಾರವಾರದಿಂದ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದಾಳಿಯ ವೇಳೆ ಲಭ್ಯವಾಗಿರುವ ದಾಖಲೆಗಳು, ನಗದು ಹಾಗೂ ಇತರೆ ಆಸ್ತಿ ವಿವರಗಳ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.