ಸುದ್ದಿಬಿಂದು ಬ್ಯೂರೋ ವರದಿ
ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಸಂದರ್ಭದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಕರ್ತವ್ಯ ನಿರತ ಮಹಿಳಾ ಎಎಸ್‌ಐ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಎಗರಿಸಿದ ಘಟನೆ ನಡೆದಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಇತ್ತೀಚೆಗೆ ಲಭಿಸಿದ ನ್ಯಾಯಾಲಯದ ರಿಲೀಫ್‌ನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳನ್ನಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಮುಂಭಾಗ ಜಮಾಯಿಸಿದ್ದರು. ತನಿಖಾ ಸಂಸ್ಥೆಗಳ ದುರುಪಯೋಗ, ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ಕೈಬಿಟ್ಟ ವಿಚಾರ ಹಾಗೂ ವಿಬಿ–ಜಿ ರಾಮ್ ಜಿ ವಿಧೇಯಕದ ಅಂಗೀಕಾರ ವಿರೋಧಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಬಿಜೆಪಿ ಕಚೇರಿಗೆ ಪ್ರತಿಭಟನಾಕಾರರು ನುಗ್ಗದಂತೆ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಬ್ಯಾರಿಕೇಡ್ ದಾಟಿ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ತೀವ್ರ ನೂಕುನುಗ್ಗಲು ಉಂಟಾಯಿತು. ಇದೇ ಗದ್ದಲದ ನಡುವೆಯೇ ದುಷ್ಕರ್ಮಿಗಳು ತಮ್ಮ ಕೈಚಳಕ ತೋರಿಸಿದ್ದಾರೆ.

ಕರ್ತವ್ಯದಲ್ಲಿದ್ದ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಎಎಸ್‌ಐ ಅಮೃತಾ ಅವರ ಕೊರಳಲ್ಲಿದ್ದ ಸುಮಾರು 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಸಿದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸರವನ್ನು ಅವರು ಇತ್ತೀಚೆಗಷ್ಟೇ ಖರೀದಿಸಿದ್ದರೆಂದು ತಿಳಿದುಬಂದಿದೆ.

ಪ್ರತಿಭಟನೆಯ ಗದ್ದಲದ ನಡುವೆ ಈ ಕೃತ್ಯ ಎಸಗಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಹಾಗೂ ಮೊಬೈಲ್ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ/ಕರಾವಳಿ ಉತ್ಸವ ಹಿನ್ನಲೆ ಡಿಸೆಂಬರ್ 24ರಂದು ರಂಗೋಲಿ ಸ್ಪರ್ಧೆ