ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕರಾವಳಿ ಉತ್ಸವದ ಅಂಗವಾಗಿ ಕಾರವಾರದಲ್ಲಿ ಡಿಸೆಂಬರ್ 24, 2025 ರಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರಜಾ ಸೌಧ ಕಟ್ಟಡದ ಸಮೀಪ, ಉಪ ನೋಂದಣಿ ಕಚೇರಿ ಎದುರು ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ನಡೆಸಲಾಗುತ್ತದೆ. 14ರಿಂದ 18 ವರ್ಷ ವಯೋಮಾನದ ಬಾಲಕ–ಬಾಲಕಿಯರಿಗೆ ಫ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆ ನಡೆಯಲಿದ್ದು, 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಫ್ರೀ ಹ್ಯಾಂಡ್ ರಂಗೋಲಿ ಹಾಗೂ ಹೂವಿನ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಈ ಲಿಂಕ್ ಮೂಲಕ ಹೆಸರು ನೋಂದಾಯಿಸಬಹುದು

ಸ್ಪರ್ಧೆಯಲ್ಲಿ ಭಾಗವಹಿಸುವವರು ರಂಗೋಲಿಗೆ ಬೇಕಾದ ಬಣ್ಣದ ಪುಡಿ, ಹೂವುಗಳು ಮತ್ತು ಇತರೆ ಅಗತ್ಯ ವಸ್ತುಗಳನ್ನು ತಾವೇ ತರಬೇಕು. ಧಾರ್ಮಿಕ ದೇವರ ಚಿತ್ರಗಳು ಅಥವಾ ಕೋಮು ಭಾವನೆಗಳನ್ನು ಪ್ರತಿಬಿಂಬಿಸುವ ವಿನ್ಯಾಸಗಳಿಗೆ ಅವಕಾಶ ಇರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ನೋಂದಣಿ ಮಾಡಿದವರಲ್ಲಿ ಮೊದಲು ಹೆಸರು ದಾಖಲಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಸ್ಪರ್ಧಾರ್ಥಿಗಳಿಗೆ ಗರಿಷ್ಠ ಮೂರು ಗಂಟೆಗಳ ಕಾಲಾವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಡಿಸೆಂಬರ್ 23, 2025 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಲು ನೀಡಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಅರ್ಹ ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ/ ಜಿಪಿಎಸ್ ಟ್ರಾಕರ್ ಹೊಂದಿದ ವಲಸೆ ಪಕ್ಷಿ ಪತ್ತೆ–ಪೊಲೀಸ್‌ರಿಂದ ಮುಂದುವರೆದ ತನಿಖೆ