ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಶಾಸಕ ದಿನಕರ ಶೆಟ್ಟರು ಮೊದಲು ಉಡಾಫೆ ಮಾತನಾಡುವ ಸಂಸ್ಕೃತಿ ಬಿಡಬೇಕು, ಅವರು ಹಸೀ ಹಸೀ ಸುಳ್ಳು ಹೇಳುತ್ತಾ ಬಂದಿದ್ದಾರೆ ಇದೆ ರೀತಿ ಮುಂದುವರೆಸಿದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಬೇಕಾಗಿದೆ ಎಂದು ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂವನ್ ಭಾಗ್ವತ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಕುಮಟಾ ಪುರಸಭೆ ಕಚೇರಿಯನ್ನು ಹಳೆ ತಹಶೀಲ್ದಾರ್ ಕಚೇರಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿಗಳು ಎಲ್ಲ ಪಕ್ಷಗಳ ಸದಸ್ಯರನ್ನು ಆಹ್ವಾನಿಸಿದ್ದರಿಂದ ಕಾಂಗ್ರೆಸ್ ಮುಖಂಡರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜೆ ಮುಗಿದ ಬಳಿಕ ಕಾಂಗ್ರೆಸ್ ಮುಖಂಡರು ಮಾಧ್ಯಮದವರಿಗೆ ಹೇಳಿಕೆ ನೀಡುತ್ತಿರುವ ವೇಳೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಆಗಮಿಸಿ, ಪತ್ರಕರ್ತರ ಎದುರು “ಕಾಂಗ್ರೆಸ್ ನಾಯಕರ ಮಾತು ನಂಬಬೇಡಿ, ಎಲ್ಲವೂ ಸುಳ್ಳು” ಎಂದು ಉಢಾಫೆಯಾಗಿ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಹೊನ್ನಪ್ಪ ನಾಯ್ಕ ಅವರೊಂದಿಗೆ ಏಕವಚನದಲ್ಲಿ ಹಾಗೂ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿರುವುದು ಅಸಹ್ಯಕರ ಎಂದು ಭುವನ್ ಭಾಗ್ವತ್ ಆರೋಪಿಸಿದ್ದಾರೆ.
ಶಾಸಕರ ಇಂತಹ ವರ್ತನೆ ಒಂದೇ ಘಟನೆಗೆ ಸೀಮಿತವಲ್ಲ. ಕ್ಷೇತ್ರದ ಹಲವು ಭಾಗಗಳಲ್ಲಿ ಅವರು ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕೀಳಾಗಿ ನೋಡುವ ಧೋರಣೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಯಾವತ್ತೂ ಈ ರೀತಿಯ ಭಾಷೆ ಮತ್ತು ವರ್ತನೆ ತೋರಿಲ್ಲ. ಶಾಸಕರ ಗುಂಡಾವರ್ತನೆ ಇದೇ ರೀತಿ ಮುಂದುವರಿದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಕೆಲವು ಅಧಿಕಾರಿಗಳ ಮೇಲೂ ಶಾಸಕರು ಒತ್ತಡ ಹೇರುತ್ತಿದ್ದು, ಹಕ್ಕುಚ್ಯುತಿ ಮಾಡುವ ಬೆದರಿಕೆ ಹಾಕಿ ಅವರನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ.. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ..
ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಸ್ಪಷ್ಟ ದೃಷ್ಠಿ ಇಲ್ಲವೆಂದು ಭುವನ್ ಭಾಗ್ವತ್ ಆರೋಪಿಸಿದರು. ಕೇವಲ ಚರಂಡಿ, ರಸ್ತೆ ಹಾಗೂ ಸೇತುವೆ ನಿರ್ಮಾಣವೇ ಅಭಿವೃದ್ಧಿಯಲ್ಲ. ಐಆರ್‌ಬಿ ಮೂಲಕ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಶಿರಸಿ ರಸ್ತೆ ಆರ್‌ಎನ್‌ಎಸ್ ಮೂಲಕ ಇನ್ನೂ ಮುಗಿದಿಲ್ಲ. ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರು ಅಗತ್ಯ ಒತ್ತಡ ಹಾಕುತ್ತಿಲ್ಲ ಎಂದು ದೂರಿದರು. ಕ್ಷೇತ್ರದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳು ಇಲ್ಲ. ಹೊಸ ಕೈಗಾರಿಕೆಗಳನ್ನು ತರಲು ವಿಫಲರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಸ್ಪಷ್ಟ ಕಾರ್ಯಯೋಜನೆ ರೂಪಿಸಿಲ್ಲ. ಕುಮಟಾ ಡಿಪೋಗೆ ಒಂದೂ ಹೊಸ ಬಸ್ ತರಲಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಅನುದಾನ ವಿಚಾರದಲ್ಲೂ ಶಾಸಕರು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಹೇಳಿದರು. ಕ್ಷೇತ್ರಕ್ಕೆ 3 ಕೋಟಿ 65 ಲಕ್ಷ ರೂ. ಅನುದಾನ ಬಂದಿದ್ದು, ಅದರಲ್ಲಿ 2.60 ಕೋಟಿ ರೂ. ಮೌಲ್ಯದ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗೆ ಸರಿ ಸುಮಾರು 7 ಕೋಟಿ ರೂ., ಮುಜರಾಯಿ ಇಲಾಖೆ, ಲ್ಯಾಂಡ್ ಆರ್ಮಿ ಸೇರಿದಂತೆ ವಿವಿಧ ಮೂಲಗಳಿಂದ ಸಾಕಷ್ಟು ಅನುದಾನ ಬಂದಿದೆ. ಆದರೂ ಸರ್ಕಾರ ದಿವಾಳಿಯಾಗಿದೆ, ಅನುದಾನ ಬರ್ತಿಲ್ಲ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ
ಇನ್ನು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಅನಾವಶ್ಯಕವಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಾಯಕ ಹೊನ್ನಪ್ಪ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯ್ಕ, ವಿ.ಎಲ್. ನಾಯ್ಕ, ಗ್ಯಾರಂಟಿ ಅಧ್ಯಕ್ಷ ಅಶೋಕ್ ಗೌಡ, ಮಹಿಳಾ ತಾಲೂಕು ಅಧ್ಯಕ್ಷೆ ಭಾರತಿ ಪಟಗಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ್ ನಾಯ್ಕ, ಶಂಕರ ಅಡಿಗುಂಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರ ನಾಯ್ಕ (ಕೋಡ್ಕಣಿ), ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣಾನಂದ್, ಅಲ್ಪಸಂಖ್ಯಾತ ತಾಲೂಕು ಅಧ್ಯಕ್ಷ ಹನೀಫ್ ಸಾಬ್, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ನಾಗರಾಜ್ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ವೈಭವ್ ನಾಯ್ಕ, ಕಿಸಾನ್ ಸೆಲ್ ಅಧ್ಯಕ್ಷ ಗಿರೀಶ್ ಪಟಗಾರ, ಕೆಡಿಪಿ ಸದಸ್ಯ ರಾಘವೇಂದ್ರ ಪಟಗಾರ, ಭೂ ನ್ಯಾಯ ಮಂಡಳಿ ಸದಸ್ಯ ಗಜಾನನ ನಾಯ್ಕ ಸೇರಿದಂತೆ ಪುರಸಭೆ, ಪಂಚಾಯತ್ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.




