ರಾಜಕೀಯ ನಕ್ಷೆಯಲ್ಲಿ ಶಿವಮೊಗ್ಗವನ್ನು ಗುರುತಿಸುವಂತೆ ಮಾಡಿದವರು ಎಸ್. ಬಂಗಾರಪ್ಪ. ಜನರಲ್ಲಿ ರಾಜಕೀಯ ಪ್ರಜ್ಞಾವಂತಿಕೆ ಹುಟ್ಟುಹಾಕುವಲ್ಲಿ ಬಂಗಾರಪ್ಪ ಅವರ ಪಾತ್ರ ದೊಡ್ಡದು. ಹೀಗಾಗಿ ಇವರು ಮುಖ್ಯಮಂತ್ರಿಯಾಗಿ ಕೇವಲ 2 ವರ್ಷ ಅಧಿಕಾರ ಮಾಡಿದ್ದರೂ ಹೆಸರು ಶಾಶ್ವತಗೊಳ್ಳುವಂತೆ ಜನಪರರ ಯೋಜನೆ ಕೈಗೊಂಡಿರುವುದು ಇಂದಿಗೂ ಜನರು ನೆನೆಯುತ್ತಾರೆ.
ಅಪಾರ ಸಂಘಟನಾ ಚತುರತೆಯಿಂದ ಹಲವು ಪಕ್ಷಗಳನ್ನು ಕಟ್ಟಿ ಬೆಳೆಸಿ, ಸದಾ ಕ್ರಿಯಾಶೀಲರಾಗಿದ್ದರು ಬಂಗಾರಪ್ಪ. ಜನರಲ್ಲೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿದರು. ತಾವು ಹುಟ್ಟಿಬಂದ ಸಮುದಾಯಕ್ಕೊಂದು ಸ್ವಾಭಿಮಾನದ ನೆಲೆ ಕಲ್ಪಿಸಲು ಬಂಗಾರಪ್ಪ ಪ್ರಯತ್ನಿಸಿದರು. ಸಮಾಜವಾದಿ ನೆಲೆಯಿಂದ ಬಂದಿದ್ದರಿಂದ ಯಾವುದೇ ಒಂದು ಸಮುದಾಯದ ನಾಯಕರಾಗಲು ಅವರು ಇಷ್ಟಪಡಲಿಲ್ಲಾ. ಅವರು ಈಡಿಗ ಸಮುದಾಯಕ್ಕೆ ಏನು ಮಾಡಿದ್ದಾರೆಂಬ ಮಾತು ಬಂದಾಗಲೆಲ್ಲಾ ಅವರು ನೀಡುತ್ತಿದ್ದುದ್ದು ಇದೇ ಉತ್ತರ.
ಜನನ : ಶಿವಮೊಗ್ಗಾ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲಿ. ಕಲ್ಲಪ್ಪ ಮತ್ತು ಕಲ್ಲಮ್ಮ ದಂಪತಿಗಳ ಪುತ್ರನಾಗಿ 26-10-1933 ರಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ಬಂಗಾರಪ್ಪ ಬಡತನದಿಂದಲೇ ಬೆಳೆದು ಬಂದವರು. ಹಠ ಹಾಗೂ ಇಚ್ಛಾಶಕ್ತಿಗೆ ಅನ್ವರ್ಥಕ ಸಾರೆಕೊಪ್ಪ ಬಂಗಾರಪ್ಪ. ಕಡ್ಡಿ ತುಂಡು ಮಾಡಿದಂತೆ ಖಡಕ್ ಮಾತುಗಳಿಂದಲೇ ಜನರಿಗೆ ಹತ್ತಿರವಾಗಿದ್ದರು. ಗಾಯಕರಾಗಿ ಕಲೆ, ಸಾಹಿತ್ಯ, ನಾಟಕ, ಯೋಗ, ಬ್ಯಾಡ್ಮಿಂಟನ್, ಡೋಲು ಬಾರಿಸುವುದು ಹೀಗೆ ವಿವಿಧ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದರು.
ಹೋರಾಟ : ಚಿಕ್ಕವನಿರುವಾಗ ತಮ್ಮ ಗ್ರಾಮದಲ್ಲಿ ಸವರ್ಣಿಯ ಗಣೇಶ ಹಬ್ಬಕ್ಕೆ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದರೆ ಹಿಂದುಳಿದ ವರ್ಗದವರು ದಲಿತರು ಗಣಪತಿ ಮೂರ್ತಿಯನ್ನು ನೋಡಲು ಅವರ ಮನೆಯಲ್ಲಿ ಅವಕಾಶ ಇರಲಿಲ್ಲಾ. ಹೀಗಾಗಿ ನಾವೇ ಗಣೇಶನನ್ನು ಕುಳ್ಳಿಸುವ ಎಂದು ನಿರ್ಧರಿಸಿದ ಬಂಗಾರಪ್ಪ ತನ್ನ ತಾಯಿಗೆ ವಿಷಯ ತಿಳಿಸಿದಾಗ ತಾಯಿ ಒಪ್ಪಿಗೆ ನೀಡುವುದಿಲ್ಲಾ. ಸವರ್ಣಿಯರು ಮಾತ್ರ ಗಣೇಶನನ್ನು ಕುಳ್ಳಿಸುತ್ತಾರೆ. ಈ ವಿಷಯ ನಿಮ್ಮ ಅಪ್ಪನಿಗೆ ಗೊತ್ತಾದರೆ ಕೋಪಗೊಳ್ಳುತ್ತಾರೆ ಎಂದರು. ಚಲಬಿಡದ ಬಂಗಾರಪ್ಪ ಮಣ್ಣಿನ ಮೂರ್ತಿಯನ್ನು ಮನೆಗೆ ತಂದು ಕುಳಿಸಿ ಪೂಜೆ ಮಾಡುತ್ತಾರೆ. ಎಲ್ಲಾ ಜಾತಿಯವರಿಗೂ ಒಳಬರಲು ಮುಕ್ತ ಅವಕಾಶವನ್ನು ನೀಡಿ ತೊಡೆ ತಟ್ಟಿನಿಂತ ಬಂಗಾರಪ್ಪ ಹೋರಾಟದ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುತ್ತಾರೆ. ಕಾವೇರಿ ನೀರು, ಗೇಣಿದಾರರ ಸಮಸ್ಯೆ ಸೇರಿ ಸಾಕಷ್ಟು ಹೋರಾಟದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ವಿವಾಹ : ಎಸ್. ಬಂಗಾರಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಗಾಂವ್ ಗ್ರಾಮದ ತಿರುಕಪ್ಪ ನಾಯ್ಕ ದಂಪತಿಗಳ ಮಗಳಾದ ಶಕುಂತಲಾ ಅವರನ್ನು 1958ರಲ್ಲಿ ಮಳಲಗಾಂವನಲ್ಲಿಯೇ ವಿವಾಹವಾದರು. ಹೀಗಾಗಿ ಉತ್ತರ ಕನ್ನಡ ಜಿಲ್ಲೆ ಬಂಗಾರಪ್ಪನವರಿಗೆ ಶಿವಮೊಗ್ಗಾದಷ್ಟೇ ಪ್ರೀತಿ ತುಂಬಿತ್ತು. ಇಲ್ಲಿಯು ಕೂಡ ರಾಜಕೀಯವಾಗಿ ತಮ್ಮ ಹಿಡಿತವನ್ನು ಹೊಂದಲು ಅನುಕೂಲವಾಯಿತು.
ಬಡವರ ಬಂಧು : ವಿವಿಧ ಖಾತೆಯ ಸಚಿವರಾಗಿ ಸಾಕಷ್ಟು ಜನಪರ ಕಾರ್ಯ ಮಾಡಿದ್ದಾರೆ. ಈಗಲೂ ಕೂಡ ಅವರ ಅಧಿಕಾರವಧಿಯಲ್ಲಿ ಮಾಡಿದ ಕಾರ್ಯವನ್ನು ಜನರು ನೆನೆಸುತ್ತಾರೆ. ಇನ್ನು ಇವರು 1990ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ‘ಆಶೃಯ’ ಮನೆ ನಿವೇಶನ ಇಲ್ಲದವರಿಗೆ ಸರ್ಕಾರದಿಂದ ಜಮೀನು ಖರೀದಿಸಿ ನಿವೇಶನ ಉಚಿತವಾಗಿ ಹಂಚಿಕೆ. ತಲಾ ಒಂದು ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ 25 ಸಾವಿರ ರೂ. ನಂತೆ 6 ತಿಂಗಳಲ್ಲಿ 8.50ಲಕ್ಷ ವಸತಿಹೀನರಿಗೆ ವಸತಿ ಕಲ್ಪಿಸಿದ ಮಹಾನಾಯಕ.
ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಲು ‘ಅಕ್ಷಯ ಯೋಜನೆ’ ಜಾರಿಗೆ ತಂದರು. ಶಾಲೆಗೆ ಬರುವ ಪ್ರತಿ ಮಕ್ಕಳಿಗೆ ದಿನಕ್ಕೆ 1ರೂ ನೀಡಲಾಗುತ್ತಿತ್ತು. ಹೀಗಾಗಿ ಶಾಲೆಬಿಟ್ಟ ಮಕ್ಕಳೆಲ್ಲಾ ಶಾಲೆಯತ್ತ ಮುಖ ಮಾಡಿದರು. ವಿವಿಧ ಜಾತಿ, ಜನಾಂಗ ಹಾಗೂ ಧರ್ಮಗಳ ನಂಬಿಕೆಗೆ ಒತ್ತು ನೀಡಿದ ಬಂಗಾರಪ್ಪ ‘ಆರಾಧನಾ’ ಯೋಜನೆಯ ಮೂಲಕ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ನೆರವು ಕಲ್ಪಿಸಿದರು.
ಗ್ರಾಮೀಣ ಭಾಗದ ಜನರಿಗಾಗಿ ಹಾಗೂ ದಲಿತರಿಗೆ ಆರೋಗ್ಯಭಾಗ್ಯ ಕಲ್ಪಿಸುವ ‘ಶುಶ್ರೂಷಾ’ ಯೋಜನೆ ಜಾರಿಗೆ ತಂದರು. ರೋಗ ಪೀಡಿತರಾದರೆ ಅವರನ್ನು ಪರೀಕ್ಷಿಸಿ ಸ್ಥಳದಲ್ಲಿಯೇ ಶುಶ್ರೂಷೆ ಮಾಡಿ ಚಿಕಿತ್ಸೆ ನೀಡುವ ಉಚಿತ ಯೋಜನೆಯಿದು.
‘ವಿಶ್ವ’ ಬಂಗಾರಪ್ಪನವರು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಕ್ರಾಂತಿ ರೂಪಿಸಿದ ಯೋಜನೆ. ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳ ಅಭಿವೃದ್ಧಿ ಅಲ್ಲಿ ತಯಾರಾದ ಸಾಮಾಗ್ರಿಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಸೃಷ್ಠಿಸುವುದು ಇದರ ಮುಖ್ಯ ಧ್ಯೇಯವಾಗಿತ್ತು. ಇದಕ್ಕಾಗಿ 475ಕೋಟಿ ರೂ. ಗಳನ್ನು ಮೀಸಲಿಟ್ಟ ಅಂದಿನ ಸರ್ಕಾರ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಚೇತೋಹಾರಿಯಾಗಿತ್ತು.
ಗ್ರಾಮೀಣ ವಿದ್ಯಾರ್ಥಿಗಳ ಕಷ್ಟದ ಬದುಕನ್ನು ಕಣ್ಣಾರೆ ಕಂಡಿದ್ದ ಬಂಗಾರಪ್ಪ, ತಮ್ಮ ಅವಧಿಯಲ್ಲಿ ‘ಗ್ರಾಮೀಣ ಕೃಪಾಂಕ’ ಯೋಜನೆ ಜಾರಿಗೆ ತಂದರು. ಉದ್ಯೋಗದಲ್ಲಿ ಶೇ. 15ರಷ್ಟನ್ನು ಕೃಪಾಂಕವಾಗಿ ನೀಡಲು ಅವಕಾಶ ಕಲ್ಪಿಸಿದರು.
10ಸಾವಿರ ಗುತ್ತಿಗೆ ಶಿಕ್ಷಕರು, 400ಇಂಜಿನಿಯರ್‌ಗಳ ಕೆಲಸವನ್ನು ಬಂಗಾರಪ್ಪ ಖಾಯಂ ಮಾಡಿದ್ದು, ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಆರ್ಥಿಕ ನೆರವು ಕಲಾವಿದರಿಗೆ ಪ್ರೋತ್ಸಾಹಕರ ವಾತಾವರಣ ನಿರ್ಮಿಸಿಕೊಟ್ಟಿದ್ದು ಅವರ ಸಾಧನೆಯ ಪುಟದಲ್ಲಿ ದಾಖಲಾಗಿ ಉಳಿದಿದೆ. ಇಂತಹ ಬಂಗಾರಪ್ಪ ಮುಖ್ಯಮಂತ್ರಿಯಾಗಿ ಕೇವಲ 2 ವರ್ಷಗಳಲ್ಲಿ ಸಾಕಷ್ಟು ಜನಪರ ಯೋಜನೆ ತಂದಿದ್ದರು. ಆದರೆ ರಾಜಕೀಯದ ಚದುರಂಗಾಟದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದದ್ದು ಮಾತ್ರ ಒಂದು ದುರಂತ.
ರಾಜಕೀಯವೆಂದರೆ ಹೇಸಿಗೆ ಎನ್ನುತ್ತಿದ್ದರು : 60ರ ದಶಕದಲ್ಲಿ ಆಗಷ್ಟೇ ವಕೀಲಿ ವೃತ್ತಿ ಆರಂಭಿಸಿದ್ದ ಬಂಗಾರಪ್ಪ ಅವರಿಗೆ ರಾಜಕೀಯವೆಂದರೆ ವಾಕರಿಕೆ, ಹೇಸಿಗೆ ಅನಿಸುತ್ತಿತ್ತು. ಚುನಾವಣೆಗೆ ನಿಲ್ಲುವಂತೆ ಅವರ ಮನ ಒಲಿಸಲು ಕಾಗೋಡು ತಿಮ್ಮಪ್ಪ ಹರಸಾಹಸಪಟ್ಟರು. ರಾಜಕೀಯ ಸಹವಾಸ ಬೇಡ ಎಂದು ಬೈದಿದ್ದರು. ಆದರೆ ಗೇಣಿದಾರರ ಸಮಸ್ಯೆಗಳು ಆಗ ಮಿತಿ ಮೀರಿದ್ದವು. ಈ ಸಮಸ್ಯೆ ಬಗೆಹರಿಸಲು ರಾಜಕೀಯವೊಂದೇ ನಮ್ಮಲ್ಲಿರುವ ಶಕ್ತಿ ಎಂದು ಕಾಗೋಡು ತಿಮ್ಮಪ್ಪ ಹೇಳಿದ ನಂತರ ಬಂಗಾರಪ್ಪ ಬದಲಾದರು.
ಜನರ ಸಮಸ್ಯೆ ನಿವಾರಣೆಗಾಗಿ ಸೆಟೆದುನಿಂತ ಬಂಗಾರಪ್ಪ ನಂತರ ರಾಜಕೀಯದಲ್ಲಿ ಸುಂಟರ ಗಾಳಿಯನ್ನೇ ಎಬ್ಬಿಸಿದರು. ಹಂತ ಹಂತವಾಗಿ ಜನಸಾಮಾನ್ಯರು ಸಮಸ್ಯೆಗಳನ್ನು ಕಂಡ ಬಂಗಾರಪ್ಪ ರಾಜಕೀಯದಲ್ಲಿ ಮುಂದುವರಿದು ನ್ಯಾಯ ಒದಗಿಸಲು ಮುಂದಾದರು. ಹಾಗೇ ಹಲವರನ್ನು ರಾಜಕೀಯಕ್ಕೆ ತಂದು ಅವರನ್ನು ಶಾಸಕರನ್ನಾಗಿ ಹಾಗೂ ವಿವಿಧ ಜವಾಬ್ದಾರಿಯನ್ನು ನೀಡಿದರು. ಬಂಗಾರಪ್ಪ ಅವರನ್ನು ಶಾಸಕರನ್ನಾಗಿ ಮಾಡುವ ಕಾರ್ಖಾನೆ ಎಂದು ಕರೆಯುವಂತೆ ಮಾಡಿದರು. ಇವರು 2011 ಡಿಸೆಂಬರ್ 26ರಂದು ನಿಧನರಾದರು.

ವರದಿ: ನಾಗರಾಜ ಮಂಜಗುಣಿ
ಪತ್ರಕರ್ತ, ಅಂಕೋಲಾ.



