ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತಾಲೂಕಿನ ವಡ್ಡಿಘಾಟ್ ಪ್ರದೇಶದಲ್ಲಿ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದ‌ ಘಟನೆ ನಡೆದಿದೆ.

ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟು 49 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಕುಮಟಾ–ಶಿರಸಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಬಸ್ ಮಾರ್ಗವನ್ನು ತಾತ್ಕಾಲಿಕವಾಗಿ ವಡ್ಡಿಘಾಟ್ ಮೂಲಕ ಮರುನಿರ್ದೇಶಿಸಲಾಗಿತ್ತು. ಈ ಭಾಗದ ತೀವ್ರ ತಿರುವು ಮತ್ತು ಇಳಿಜಾರುಗಳ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದೆ..

ಬಳ್ಳಾರಿಯಿಂದ ಕುಮಟಾಕ್ಕೆ ಹೊರಟಿದ್ದ ಬಸ್‌ನಲ್ಲಿ 49 ಮಂದಿ ಪ್ರಯಾಣಿಕರು ಇದ್ದು,ಬಸ್ ಪಲ್ಟಿಯಾಗಿರುವ ಸುದ್ದಿ ತಿಳಿದ ಸ್ಥಳೀಯರು‌ ತಕ್ಷಣ ಸ್ಥಳಕ್ಕೆ‌ ಧಾವಿಸಿ ಗಾಯಾಳುಗಳನ್ನು ಮೇಲಕ್ಕೆತ್ತಿ ಖಾಸಗಿ ವಾಹನಗಳ ಮೂಲಕ ಅಂಕೋಲಾ ಹಾಗೂ ಕುಮಟಾ ಸರ್ಕಾರಿ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಡ್ಡಿಘಾಟ್ ಪ್ರದೇಶದ ರಸ್ತೆ ಭಾರೀ ತಿರುವುಗಳು ಹಾಗೂ ಅಪಾಯಕಾರಿ ಇಳಿಜಾರುಗಳಿಂದಾಗಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲಿಕರಣ, ತಿರುವು ಸರಿಪಡಿಸುವಂತೆ ಸ್ಥಳೀಯರು  ಆಗ್ರಹಿಸಿದ್ದಾರೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ /ಬರ್ಗಿಯಲ್ಲಿ ತಪ್ಪಿದ್ದ ಮತ್ತೊಂದು ಬೆಂಕಿ ದುರಂತ