ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಕಳೆದ ಒಂದು ವರ್ಷದಿಂದ ಕಾರಣಾಂತರಗಳಿಂದ ಸ್ಥಗಿತಗೊಂಡ ಮುರುಡೇಶ್ವರ ಬೀಚ್ ಬೋಟಿಂಗ್ ಮತ್ತು ಕಡಲತೀರಕ್ಕೆ ಪ್ರವಾಸಿಗರ ನಿಷೇಧ ತೆರವುಗೊಂಡಿದೆ…ಈಗ ಮತ್ತೆ ಮುರುಡೇಶ್ವರ ಕಡಲತೀರದಲ್ಲಿ ಹಿಂದಿನ ಕಲರವ ಶುರುವಾಗಿದೆ…

ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಮುರುಡೇಶ್ವರದಲ್ಲಿ ನಡೆಯುತ್ತಿದ್ದ ಬೀಚ್ ಬೋಟಿಂಗ್, ಜಲಸಾಹಸ ಕ್ರೀಡೆ, ಹಾಗೂ ಕಡಲತೀರಕ್ಕೆ ಪ್ರವಾಸಿಗರ ನಿಷೇಧಗೊಂಡು  ಬರೋಬ್ಬರಿ ಒಂದು ವರ್ಷ ಕಳೆಯುತ್ತಾ  ಬಂದಿದೆ.ಈಗ ಒಂದು ವರ್ಷದ ಬಳಿಕ ಪುನಃ ಕಡಲತೀರಕ್ಕೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟು ನಿಷೇಧ ತೆರವು ಮಾಡಲಾಗಿದೆ, ಇಲ್ಲಿ ನಡೆಯುತ್ತಿದ್ದ ಪ್ರವಾಸಿಗರ ಅಚ್ಚಮೆಚ್ಚಿನ  ಬೋಟಿಂಗ್ ಮತ್ತು ಜಲಸಾಹಸ ಕ್ರೀಡೆಗೂ ಕೂಡಾ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಸಿಕ್ಕಿ ಮತ್ತೆ ಜಲಸಾಹಸ ಕ್ರೀಡೆ ಮತ್ತು ಬೋಟಿಂಗ್ ಆರಂಭಗೊಂಡಿದೆ. ಕಳೆದ ಒಂದು ವರ್ಷದಿಂದ ಮಳೆಗಾಲದ ಎರಡು ತಿಂಗಳು ಹೊರತು ಪಡಿಸಿ ಇನ್ನುಳಿದ ತಿಂಗಳಲ್ಲಿ ಬಿಕೋ ಎನ್ನುತ್ತಿದ್ದ ಮುರುಡೇಶ್ವರ ಕಡಲತೀರದಲ್ಲಿ ಈಗ ಪ್ರವಾಸಿಗರ ಕಲರವ ಕಂಡು ಬರುತ್ತಿದೆ, ಮತ್ತೆ ಕಡಲತೀರಕ್ಕೆ ಜೀವಕಳೆ ಬಂದಿದ್ದು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ, ಬೇಕಾದ ಬೋಟ್ ನಲ್ಲಿ ಕುಳಿತು ಸಮುದ್ರಯಾನ ನಡೆಸಿ ಖುಷಿ ಪಡುತ್ತಿದ್ದಾರೆ, ಓಷನ್ ಅಡ್ವೆಂಚರ್ ನಿಂದ ಬೋಟಿಂಗ್ ಗುತ್ತಿಗೆ ನಡೆಯುತ್ತಿದ್ದು ಪ್ರವಾಸಿಗರ ಸುರಕ್ಷಿತ ದೃಷ್ಟಿಯಿಂದ ಲೈಪ್ ಜಾಕೇಟ್ ಬಳಕೆ ಮಾಡಿ ಬೋಟಿಂಗ್ ನಡೆಸಲಾಗುತ್ತಿದೆ…ಈಗ ಕಡಲತೀರದುದ್ದಕ್ಕೂ ಪ್ರವಾಸಿಗರು ಮೋಜುಮಸ್ತಿಯಲ್ಲಿ ತೊಡಗಿಕೊಂಡು ಖುಷಿ ಪಡುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ಮತ್ತು  ಡಿಸೆಂಬರ್ ತಿಂಗಳಲ್ಲಿ ಪ್ರವಾಸಕ್ಕೆ ಬಂದ ಶಾಲಾ ವಿದ್ಯಾರ್ಥಿಗಳ ಸಾವು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಆಗಿತ್ತು, ಅದಾದ ಬಳಿಕ ಕಡಲತೀರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು ಅದಾದ ಬಳಿಕ ಬೋಟಿಂಗ್ ಕೂಡಾ ಸ್ಥಗಿತ ಮಾಡಲಾಗಿತ್ತು ಬಳಿಕ ಪನಃ ಎಲ್ಲ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿತ್ತು ಪ್ರವಾಸಿಗರು ಕೇವಲ ದೇವಾಲಯಕ್ಕೆ ಬಂದು ಹೋಗುತ್ತಿದ್ದರು, ಈಗ ಒಂದು ವರ್ಷದ ಬಳಿಕ ಎಲ್ಲ ಸಮಸ್ಯೆಯೂ ದೂರವಾಗಿ ಪ್ರವಾಸೋದ್ಯಮ ಇಲಾಖೆ ಜಿಲ್ಲಾಡಳಿತ ಬೋಟಿಂಗ್ ನಡೆಸಲು ಮತ್ತು ಕಡಲತೀರಕ್ಕೆ ಹೋಗಲು ಪ್ರವಾಸಿಗರಿಗೆ ಪೂರ್ಣ ಪ್ರಮಾಣದ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಈಗ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಖುಷಿ ಖುಷಿಯಾಗಿ ಕಡಲತೀರಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ…

ಇದನ್ನೂ ಓದಿ/ ಕುಮಟಾ ತಹಶೀಲ್ದಾರ‌ ಕಚೇರಿಗೆ ಬಡಿದ ಸಿಡಿಲು : ಭೂಕಂಪನದ ಅನುಭವ