ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತಾಲೂಕಿನ ಗೌಡಳ್ಳಿ ಹತ್ತಿರದ ಖಾನನಗರದ ರಸ್ತೆ ಬದಿಯಲ್ಲಿ ಇಂದು ಬೆಳಿಗ್ಗೆ ಅಪರೂಪದ ದೃಶ್ಯ ಕಂಡುಬಂದಿದ್ದು, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ..
ರಸ್ತೆ ಬದಿಯಲ್ಲಿ ಚಿರತೆ ಮರಿ ಕಂಡ ವಾಹನ ಸವಾರರು ಹಾಗೂ ಪಾದಚಾರಿಗಳು ಆ ದೃಶ್ಯವನ್ನು ಕಂಡು , ಮೊಬೈಲ್‌ಗಳಲ್ಲಿ ಫೋಟೋ,ವೀಡಿಯೋ ಸೆರೆ ಹಿಡಿದುಕೊಂಡಿದ್ದಾರೆ. ಇನ್ನೂ ಕೆಲವರು ಮರಿಯತ್ತ ಕೈ ಚಾಚಿ ಪ್ರೀತಿಯಿಂದ ಮುಟ್ಟಲು ಯತ್ನಿಸುತ್ತಿರುವ ದೃಶ್ಯವೂ ಕಂಡುಬಂತು. ಅರಂಭದಲ್ಲಿ ಭಯಗೊಂಡ ಜನರು ನಂತರ ಅದರ ಮುದ್ದಾದ ನೋಟ ನೋಡಿ ಖುಷಿಪಟ್ಟರು.
ಘಟನೆಯ ಮಾಹಿತಿ ದೊರೆತ ತಕ್ಷಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರ ನೇತೃತ್ವದಲ್ಲಿ, ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಸುರಕ್ಷಿತ ರೀತಿಯಲ್ಲಿ ಮರಿಯನ್ನು ತಾಯಿ ಚಿರತೆಯ ಮಡಿಲಿಗೆ ಸೇರಿಸಿ, ನಂತರ ಕಾಡಿಗೆ ಬಿಡುಗಡೆ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯಿತು.