ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯದಲ್ಲಿ ಇವತ್ತಿನಿಂದ ಜಾತಿಗಣತಿ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಕೆಲವೊಂದು ಸಮಸ್ಯೆಗಳು ಇನ್ನೂ ಬಗೆಹರಿಯದ ಕಾರಣ, ಇವತ್ತಿನಿಂದ ಸಮೀಕ್ಷೆ ನಡೆಯುವುದೇ ಅನುಮಾನ ಎನಿಸುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಮೀಕ್ಷೆ ನಡೆಸಲು ಮುಖ್ಯವಾಗಿ ಬೇಕಾದ ಆ್ಯಪ್ ಇನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಆ್ಯಪ್‌ನ್ನು ಇಂದು ಬೆಳಗ್ಗೆ ಹತ್ತು ಗಂಟೆಯ ನಂತರ ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ವಿಚಾರವಾಗಿ ಹೈಕೋರ್ಟ್‌ನಲ್ಲಿ PIL ಸಲ್ಲಿಕೆಯಾಗಿದೆ. ಕೋರ್ಟ್ ಇಂದು PIL ಅರ್ಜಿಯನ್ನು ವಿಚಾರಣೆಗಾಗಿ ತೆಗೆದುಕೊಂಡು ತಡೆ ನೀಡಿದರೆ, ಸಮೀಕ್ಷೆ ನಿಂತು ಹೋಗುವ ಸಾಧ್ಯತೆ ಕೂಡ ಇದೆ.
ಈ ಎಲ್ಲಾ ಕಾರಣಗಳಿಂದ, ಇವತ್ತು ನಡೆಯಬೇಕಾಗಿದ್ದ ಸಮೀಕ್ಷೆ ಏನಾದರೂ ನಿಂತು ಹೋದರೆ, ಸರ್ಕಾರಕ್ಕೆ ಭಾರೀ ಮೊತ್ತದಲ್ಲಿ ನಷ್ಟವಾಗಲಿದೆ. ಈಗಾಗಲೇ ಸಮೀಕ್ಷೆಗೆ ಬೇಕಾದ ಪುಸ್ತಕಗಳನ್ನು ಮುದ್ರಿಸಿದ್ದು, ಸಮೀಕ್ಷೆಗೆ ತಡೆ ಬಂದರೆ ನಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆ್ಯಪ್ ಮೂಲಕವೇ ಸಮೀಕ್ಷೆ ನಡೆಯಬೇಕಿರುವುದರಿಂದ, ಆ್ಯಪ್ ಬಿಡುಗಡೆಯಾಗಿ ಅದರ ಮಾಹಿತಿ ತಿಳಿದುಕೊಂಡು ಸಮೀಕ್ಷೆ ನಡೆಸುವುದು ಕಷ್ಟವಾಗಬಹುದು. ಇನ್ನೂ ಆ್ಯಪ್ ಬಿಡುಗಡೆ ಮಾಡದೇ, ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಿ ಬಳಿಕ ಮನೆ ಮನೆಗೆ ಸಮೀಕ್ಷೆಗೆ ಹೋದರೆ, ಆ್ಯಪ್ ಬಗ್ಗೆ ತರಬೇತಿ ಇಲ್ಲದೆ ಅದನ್ನು ಹೇಗೆ ಆಪರೇಟ್ ಮಾಡುವುದು ಎಂಬ ಚರ್ಚೆ ನಡೆಯುತ್ತಿದೆ.