ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: “ಸಿದ್ದಾಪುರ ಹಾಗೂ ಬನವಾಸಿ ಬೇರೆ ಜಿಲ್ಲೆಗೆ ಸೇರುತ್ತವೆ ಎಂದು ಹೇಳುವುದು ತಿರುಕನ ಕನಸು. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಸರ್ಕಾರದ ಮುಂದೆ ಅಥವಾ ಶಾಸಕರ ಮುಂದೆಯೂ ಈ ಬಗ್ಗೆ ಯಾವ ಹಂತದಲ್ಲೂ ಚರ್ಚೆಯಾಗಿಲ್ಲ,” ಎಂದು ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ನನ್ನ ಕ್ಷೇತ್ರದ ಬನವಾಸಿ ಭಾಗದ ಜನರು ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.ನಿಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಯಾರನ್ನಾದರೂ ಕೇಳಿ, ಬನವಾಸಿಯನ್ನು ತೆಗೆದುಕೊಂಡು ಸಾಗರಕ್ಕೆ ಸೇರಿಸುವುದು ಅಸಾಧ್ಯ. ಇದು ತಿರುಕನ ಕನಸು, ಕನಸಾಗಿಯೇ ಉಳಿಯಲಿದೆ,” ಎಂದು ಹೇಳಿದರು.
ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಥವಾ ಮುಖ್ಯಮಂತ್ರಿ ಮಟ್ಟದಲ್ಲಿ ಶಿರಸಿ ಜಿಲ್ಲೆ ಕುರಿತು ಯಾವುದೇ ಚರ್ಚೆಯೂ ನಡೆದಿಲ್ಲವೆಂದು ತಿಳಿಸಿದ್ದಾರೆ.
“ಉಪೇಂದ್ರ ಪೈ ಯಾಕೆ ಅಂತಹ ಹೇಳಿಕೆ ನೀಡಿದ್ದಾರೆಂಬುದು ನನಗೆ ತಿಳಿದಿಲ್ಲ. ಜಿಲ್ಲೆಯನ್ನು ಒಡೆದು ಶಿರಸಿ ಜಿಲ್ಲೆಯಾಗಿ ಮಾಡಬೇಕು ಎಂದು ಕೆಲವು ಸಂಘಟನೆಗಳ ಮೂಲಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ ಅಷ್ಟೆ, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿಲ್ಲ,” ಎಂದು ಹೆಬ್ಬಾರ ಹೇಳಿದರು.
ಜಿಲ್ಲೆ ರಚನೆ ತಕ್ಷಣ ಸಾಧ್ಯವಿಲ್ಲ ಎಂದು ತಿಳಿಸಿದ ಅವರು,
“ಜನರ ಅಭಿಪ್ರಾಯ ಬಂದ ತಕ್ಷಣವೇ ಘೋಷಣೆ ಮಾಡಲು ಸಾಧ್ಯವಿಲ್ಲ. ಸಾಧಕ-ಬಾಧಕಗಳನ್ನು, ಬುದ್ಧಿಜೀವಿಗಳ ಅಭಿಪ್ರಾಯಗಳನ್ನು, ಸಂಘಟನೆಗಳ ನಿಲುವುಗಳನ್ನು ಪರಿಗಣಿಸಿ ಚರ್ಚೆಯಾಗಬೇಕು. ಸಭೆ ಮಾಡಿದಾಕ್ಷಣ ಜಿಲ್ಲೆ ರಚನೆ ಸಾಧ್ಯವಿಲ್ಲ,” ಎಂದು ವಿವರಿಸಿದರು. ಬೆಳಗಾವಿ ಜಿಲ್ಲೆಯನ್ನು ಉದಾಹರಿಸುತ್ತಾ,
“ಎರಡು ಸಂಸದರನ್ನು ಹೊಂದಿದ ಬೆಳಗಾವಿ ಜಿಲ್ಲೆ ಇಂದಿಗೂ ಎರಡು ಜಿಲ್ಲೆಗಳಾಗಿ ವಿಭಜಿಸಲ್ಪಟ್ಟಿಲ್ಲ. ಜಿಲ್ಲೆ ಬೇರ್ಪಡದಂತೆಯೂ ಇಲ್ಲ, ಆದರೆ ಸಾಧಕ-ಬಾಧಕಗಳ ಕುರಿತಾದ ಚರ್ಚೆ ಆಧಾರದ ಮೇಲೆ ಮಾತ್ರ ನಿರ್ಣಯ ತೆಗೆದುಕೊಳ್ಳಲಾಗುತ್ತದೆ,” ಎಂದು ಅವರು ಹೇಳಿದರು.
ಜಾತಿ ಗಣತಿಯ ಕುರಿತು,
“ಈ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ನಂತರ ಮಾತನಾಡುತ್ತೇನೆ,” ಎಂದು ಹೇಳಿದರು.