ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ನಿನ್ನೆ ಗಣೇಶ ವಿಸರ್ಜನೆ ವೇಳೆ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಆದೇಶವನ್ನು ಲೆಕ್ಕಿಸದೇ ಡಿಜೆ ಬಳಕೆ ಮಾಡಿದ ಕಾರಣಕ್ಕೆ ದೂರು ನೀಡಿದ ವ್ಯಕ್ತಿಯ ಮೇಲೆ ಸಂಘಟಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಬಳಕೆ ಮಾಡಬಾರದೆಂದು ಸರಕಾರದಿಂದ ಖಡಕ್ ಆದೇಶ ಹೊರಡಿಸಲಾಗಿತ್ತು. ಆದರೆ, ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ದೊಡ್ಡ ಪ್ರಮಾಣದಲ್ಲಿ ಡಿಜೆ ಬಳಕೆ ಮಾಡಲಾಗಿದ್ದು, ಇದರಿಂದ ಸ್ಥಳೀಯರಾಗಿರುವ ಡಾ. ರವಿರಾಜ್ ಕಡ್ಲೆ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಇಂದು ಸಂಜೆ ಸ್ಥಳೀಯ ಪೊಲೀಸರು ಹಳೆ ಬಸ್ ನಿಲ್ದಾಣದ ಬಳಿ ಘಟನೆ ಸಂಬಂಧ ಪಂಚನಾಮೆ ಮಾಡುತ್ತಿರುವ ವೇಳೆ, ಕೆಲ ಯುವಕರ ಗುಂಪು ಪೊಲೀಸರ ಎದುರೇ ದೂರುದಾರ ಡಾ. ರವಿರಾಜ್ ಕಡ್ಲೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಬಾರದೆಂದು ಪೊಲೀಸರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಸಂಘಟಕರು ಪೊಲೀಸರ ಸೂಚನೆಗೆ ಲೆಕ್ಕಿಸದೆ ಡಿಜೆ ಬಳಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಪೊಲೀಸರು ತಡೆಯಲು ಯತ್ನಿಸಿದಾಗಲೂ ಸಂಘಟಕರು ಪೊಲೀಸರ ಮೇಲೂ ಅಸಹಕಾರ ತೋರಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಇದೀಗ ಕುಮಟಾ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:Lunar Eclipse 2025:ಸೆಪ್ಟಂಬರ್ 7ಕ್ಕೆ ಮಧ್ಯಾಹ್ನದ ಬಳಿಕ ಭೋಜನ ಮಾಡುವಂತಿಲ್ಲ