ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ನಗರದ ಗಾಂಧಿನಗರದ ರಿಕ್ಷಾ ಚಾಲಕ ಸಿಮೋನ್ ಅವರ ಮನೆ ವಿದ್ಯುತ್ ಅವಘಡದಿಂದಾಗಿ ಸುಟ್ಟು ಹೋದ ಹಿನ್ನೆಲೆಯಲ್ಲಿ, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧನಸಹಾಯ ಮಾಡಿದರು.
ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, “ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದಾಗ ಈ ರೀತಿಯ ಅವಘಡ ಸಂಭವಿಸಿದರೆ ಸರ್ಕಾರದಿಂದಲೇ ದೊಡ್ಡ ಮೊತ್ತದ ಪರಿಹಾರ ಸಿಗುತ್ತಿತ್ತು.ಆದರೆ ಈಗ ಒಂದು ರೂಪಾಯಿಯೂ ಬರುವುದಿಲ್ಲ. ಬಡವರು ಸಹಾಯಕ್ಕಾಗಿ ಎಲ್ಲಿಗೆ ಹೋಗಬೇಕು? ಬಡವರ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ನಡವಳಿಕೆಯನ್ನು ನಾವು ಒಗ್ಗಟ್ಟಾಗಿ ಪ್ರಶ್ನಿಸಬೇಕು” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ, ಶಾಸಕರು ಹೆಚ್ಚಿನ ಪ್ರಯತ್ನ ಮಾಡಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ, ಸರ್ಕಾರದಿಂದ ಬರಬೇಕಾದ ಪರಿಹಾರಕ್ಕಾಗಿ ತಾವು ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಕೂಡ ಉಪಸ್ಥಿತರಿದ್ದರು.