ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ : ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶವ ಹೂಳಲ್ಪಟ್ಟಿರುವ ಪ್ರಕರಣ ತೀವ್ರ ತಿರುವು ಪಡೆದುಕೊಂಡಿದೆ. ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶೋಧ ಕಾರ್ಯಾಚರಣೆ ಮುಂದುವರೆಸುತ್ತಿರುವ ನಡುವೆ, ತಂಡದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ವಿರುದ್ಧ ಗಂಭೀರ ಆರೋಪ ಹೊರಬಿದ್ದಿದೆ.
ಮಂಜುನಾಥ ಗೌಡ ಅವರು ಪ್ರಕರಣದ ದೂರುದಾರನಿಗೆ “ದೂರು ಹಿಂಪಡೆಯದಿದ್ದರೆ ಬಂಧನ ಹಾಗೂ ಜೀವಮಾನವಿಡೀ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದರೆಂದು ದೂರು ದಾಖಲೆಯಾಗಿದೆ. ನೇತ್ರಾವತಿ ನದಿಯ ತೀರದಲ್ಲಿ ಶೋಧ ನಡೆಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ದೂರುದಾರನ ಪರ ವಕೀಲರು ಮೇಲಾಧಿಕಾರಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, “ನಾನು ಬೇರೆಯವರ ಪ್ರೇರಣೆಯಿಂದ ದೂರು ನೀಡಿದ್ದೇನೆ” ಎಂಬ ಹೇಳಿಕೆ ನೀಡಲು ದೂರುದಾರನನ್ನು ಒತ್ತಾಯಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.ಈ ಬೆಳವಣಿಗೆ ಸಾಮಾಜಿಕ ವಲಯಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಮಂಜುನಾಥ ಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ವಿರೋಧ ವ್ಯಕ್ತವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಶೋಧದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದ ಅವರು ಇಂದಿನಿಂದ ಎಸ್‌ಐಟಿ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನಲಾಗಿದೆ.
ಶೋಧ ಕಾರ್ಯಾಚರಣೆಯಲ್ಲಿ ಈಗಾಗಲೇ ಕೆಲ ಮೂಳೆಗಳು ಪತ್ತೆಯಾಗಿದ್ದು, ದೂರುದಾರನ ಹೆಸರು ಹಾಗೂ ವಿವರಗಳನ್ನು ಭದ್ರತಾ ಕಾರಣಕ್ಕಾಗಿ ರಹಸ್ಯವಾಗಿರಿಸಲಾಗಿದೆ. ತನ್ನ ಮುಖ ಮುಚ್ಚಿಕೊಂಡು ದೂರುದಾರನು ಅಧಿಕಾರಿಗಳೊಂದಿಗೆ ಶೋಧದಲ್ಲಿ ಭಾಗವಹಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಸಾಮಾಜಿಕ ಹೋರಾಟಗಾರರು “ಮಂಜುನಾಥ ಗೌಡ ಅವರಿಗೆ ದೂರುದಾರನನ್ನು ಬೆದರಿಸಲು ಸೂಚಿಸಿದವರು ಯಾರು ಎಂಬುದರ ತನಿಖೆಯೂ ಅಗತ್ಯ. ಈ ಮೂಲಕ ಪ್ರಕರಣದ ಹಿಂದಿರುವ ನಿಜವಾದ ಸೂತ್ರದಾರರನ್ನು ಪತ್ತೆಹಚ್ಚಬಹುದು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಘೋಷಿಸಿದ ವಿಶೇಷ ನ್ಯಾಯಾಲಯ