ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ಮನುಷ್ಯನಿಗೆ ಆನಂದ, ನೆಮ್ಮದಿ ಬೇಕೆಂದರೆ ಭಗವಂತನ ಭಕ್ತಿ ಪ್ರಾಪ್ತವಾಗಬೇಕು.ಅದಕ್ಕೆ ಚಾತುರ್ಮಾಸ್ಯ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ ೨೨ನೇ ದಿನದ ಕಾರ್ಯಕ್ರಮದಲ್ಲಿ ಮಿರ್ಜಾನ, ಕಾಗಾಲ ಮತ್ತು ಅಘನಾಶಿನಿ ಗ್ರಾಪಂ ವ್ಯಾಪ್ತಿಯ ನಾಮಧಾರಿ ಕೂಟದಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮ ಮಾರ್ಗದಲ್ಲಿಯೇ ಸುಖವಿದೆ ಎಂದು ಋಷಿಮುನಿಗಳು ಹೇಳಿದ್ದಾರೆ. ಸುಖ ಪ್ರಾಪ್ತಿಗಾಗಿ ನಾವು ಧರ್ಮಾಚರಣೆ ಮಾಡಬೇಕು.

ಮಾಯ, ಮೋಹವನ್ನು ತೊರೆದು ಜೀವನದಲ್ಲಿ ಬದುಕಬೇಕು. ಬದುಕೆಂಬ ಪ್ರಯಾಣದಲ್ಲಿ ಎದುರಾಗುವ ಹಲವು ಬಂಧಗಳನ್ನು ಬಿಡಿಸಿಕೊಂಡು ಸಾಗಬೇಕು. ತ್ಯಾಗದ ಮೂಲಕ ಬದುಕು ಸಾಗಿಸಿದಾಗ ನೀವು ಮಾಡಿದ ತ್ಯಾಗವು ಮುಂದಿನ ಜೀವನಕ್ಕೆ ಸಹಾಯಕಾರಿಯಾಗುತ್ತದೆ ಎಂದ ಶ್ರೀಗಳು ಚಂದ್ರ ರಾಜವಂಶದ ರಾಜ ರಂತಿದೇವನ ಕಥೆಯನ್ನು ವಿವರಿಸುತ್ತ ತ್ಯಾಗದ ರೂಪವಾದ ದಾನದ ಬಗ್ಗೆ ವಿಶ್ಲೇಷಿಸಿದರು. ದಾನದಿಂದಲೇ ರಾಜ ರಂತಿದೇವ ಹೇಗೆ ಭಗವಂತನ ಸಾಕ್ಷಾತ್ಕಾರಕ್ಕೆ ಒಳಗಾದ ಎಂಬುದನ್ನು ಬಹಳ ಮನೋಜ್ಞವಾಗಿ ಶ್ರೀಗಳು ವಿವರಿಸಿದರು.

ಧಾರ್ಮಿಕ ಜಾಗೃತಿಗೊಳಿಸುತ್ತಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವ ಭಕ್ತರು ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯಾದರೂ ಭಗವಂತನ ಧ್ಯಾನ ಸಂರ್ಕೀತನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.ಚಾತುರ್ಮಾಸ್ಯ ವ್ರತಚಾರಣೆ ೨೨ನೇ ದಿನದ ಕಾರ್ಯಕ್ರಮದಲ್ಲಿ ಮಿರ್ಜಾನ ಮತ್ತು ಕಾಗಾಲ ಗ್ರಾಮ ಪಂಚಾಯತ್ ವಾಪ್ತಿಯ ಭೈರವೇಶ್ವರಕೇರಿ, ರಾಮನಗರ, ಹೆಗಲೆ, ಗೌರಹಸಗಿ, ದೇವಸ್ಥಾನಕೆರಿ ಮಿರ್ಜಾನ್, ಅಘನಾಶಿನಿ ಹಾಗೂ ಕಾಗಾಲ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಹಾಗೂ ಹರಿಕಾಂತ ಸಮಾಜ ಮತ್ತು ಅಂಬಿಗರ ಸಮಾಜ ಅಘನಾಶಿನಿ, ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು, ಮಡಿವಾಳ ಸಮಾಜ ಬಾಂಧವರು ಕುಮಟಾ ಹಾಗೂ ಮಿರ್ಜಾನ್ ನ ರಾಮಕ್ಷತ್ರಿಯ ಸಮಾಜವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಲೋಹಿತ್ ಹಿರಣ್ಣಯ್ಯ ನಾಯ್ಕ್ ದಂಪತಿ ಮುಗ್ವೆಕಾನವಾಡಿ ಮಿರ್ಜಾನ್ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿಸುವುದರ ಜೊತೆಗೆ ಇದಿನ ಸಿಹಿ ವಿತರಿಸಿದರು.

ಇನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ನಾಯ್ಕರು ಗುರುಗಳ ದರ್ಶನ ಪಡೆದು ಫಲಮಂತ್ರಾಕ್ಷತೆ ಪಡೆದರು.ಕುಮಟಾ ಪುರಸಭೆ ಅಧಿಕಾರಿಯಾದ ಎಂ ಆರ್ ಸ್ವಾಮಿ, ಶ್ರೀಧರ ಗೌಡ, ಶಿರಸಿ ವರದಿಗಾರ ಪ್ರದೀಪ್ ಶೆಟ್ಟಿ ಅವರು ಆಗಮಿಸಿ, ಶ್ರೀಗಳ ಆಶೀರ್ವಾದ ಪಡೆದರು. ಶಶಿಕಾಂತ ಪಾಂಡುರಂಗ ನಾಯ್ಕ್ ಅಘನಾಶಿನಿ, ಚಂದ್ರಹಾಸ ಶಾಂತಪ್ಪ ನಾಯ್ಕ್ ಕಾಗಾಲ ಅವರು ಗುರು ಸೇವೆ ಸಲ್ಲಿಸಿದರು. ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪುನೀತರಾದರು.

ಇದನ್ನೂ ಓದಿ: ಧರ್ಮಸ್ಥಳದ 6ನೇ ಪಾಯಿಂಟ್‌ನಲ್ಲಿ ಮಾನವ ಮೂಳೆ ಪತ್ತೆ