ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಾದ್ಯಂತ ಭಾರೀ ಮಳೆಗೆ ತತ್ತರಿಸಿದ್ದು, ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಊರಕೇರಿ, ಕೆಳಗಿನಕೇರಿ ಹಾಗೂ ಹರಿಜನಕೇರಿ ಭಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿಹರಿಯುತ್ತಿದ್ದು, 17ಕ್ಕೂ ಹೆಚ್ಚು ಮನೆಗಳು ಹಾಗೂ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿವೆ.

ಬಡಗಣಿ ಹಾಗೂ ಚಂದ್ರಪ್ರಭಾ ನದಿಗಳು ಉಕ್ಕಿಹರಿಯುತ್ತಿದ್ದು ಗ್ರಾಮಸ್ಥರಲ್ಲಿ ಆತಂಕವನ್ನು ಹುಟ್ಟಿಸಿದೆ. ಪ್ರವಾಹದಿಂದಾಗಿ ಊರಕೇರಿಯ 17 ಕುಟುಂಬಗಳನ್ನು ಸ್ಥಳಾಂತರಿಸಿ, ಕಡುವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಸ್ಥಳಾಂತರ ಕಾರ್ಯವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ನಿರ್ವಹಿಸಿದ್ದಾರೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಕುಮಟಾದಲ್ಲಿ 104.6 ಮಿ.ಮೀ ಮಳೆಯಾದ ಹಿನ್ನೆಲೆ, ತಾಲೂಕಿನ ಕೆಲವಡೆ ಗುಡ್ಡದ ಹಿಮುಖದಲ್ಲಿರುವ ಮನೆಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಲಾವೃತಗೊಂಡ ಪ್ರದೇಶಗಳಲ್ಲಿ ಜಾನುವಾರುಗಳೂ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸ್ಥಳೀಯ ಆಡಳಿತ ಭರದಿಂದ ಕಾರ್ಯ ನಿರ್ವಹಿಸುತ್ತಿದೆ.

ಕೃಷಿಭೂಮಿ, ತೋಟಗಳು, ಗದ್ದೆಗಳು ನೀರಿನಿಂದ ಆವೃತ್ತಗೊಂಡಿದ್ದು, ಗ್ರಾಮಸ್ಥರಲ್ಲಿ ಆರ್ಥಿಕ ನಷ್ಟದ ಆತಂಕ ಎದುರಾಗಿದೆ.

ಇದನ್ನೂ ಓದಿ: ಭಾರೀ ಮಳೆ ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ