ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ರಾಜ್ಯದಲ್ಲಿ ಭೂಕುಸಿತ ಮತ್ತು ಕಡಲ ಕೊರೆತದಿಂದ ಹಾನಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಪರಿಹಾರ ಕ್ರಮವಾಗಿ 800 ಕೋಟಿಯ ಅನುದಾನವನ್ನು ಮೀಸಲಿಟ್ಟಿದ್ದು, ಉತ್ತರ ಜಿಲ್ಲೆಯಲ್ಲಿಯೂ ಭೂಕುಸಿತ ಹಾಗೂ ಕಡಲಕೊರತೆ ಉಂಟಾಗುತ್ತಿದ್ದು, ಇದನ್ನ ತಡೆಯಲು 200ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ಭೂಕುಸಿತ ನಿಯಂತ್ರಣಕ್ಕಾಗಿ 6 ಜಿಲ್ಲೆಗಳಿಗೆ 500 ಕೋಟಿ ಹಾಗೂ ಕಡಲಕೊರೆತ ನಿಯಂತ್ರಣಕ್ಕಾಗಿ ಕರಾವಳಿಯ 3 ಜಿಲ್ಲೆಗಳಿಗೆ 300 ಕೋಟಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಅನುದಾನದ ಅನುಮೋದನೆಗೆ ಎಲ್ಲ ಸಿದ್ಧತೆ ನಡೆದಿದೆ. ಆದರೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಗೆ ವಿಳಂಬವಾಗುತ್ತಿದೆ. ಇದರಿಂದ ಕಾಮಗಾರಿಗಳಿಗೆ ಸಮಯದಲ್ಲಿ ಚಾಲನೆ ನೀಡಲಾಗುತ್ತಿಲ್ಲ,” ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ತಡೆಗೋಡೆ ಇಲ್ಲದೆ ರಸ್ತೆ ಕಾಮಗಾರಿ: ಕ್ರಮದ ಭರವಸೆ
ಸಚಿವರು ದೇವಿಮನೆ ಘಟ್ಟದಲ್ಲಿ ತಡೆಗೋಡೆ ಇಲ್ಲದೇ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನೂ ಸ್ಥಳದಲ್ಲೇ ಪರಿಶೀಲಿಸಿದರು. ಸಾರ್ವಜನಿಕ ಸುರಕ್ಷತೆಗೆ ತೊಂದರೆ ಉಂಟುಮಾಡುವ ಈ ನಿರ್ಲಕ್ಷ್ಯಕರ ಕೆಲಸವನ್ನು ಕೈಗೊಂಡಿರುವ ಕಂಪನಿಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರೀಯಾ ಹಾಜರಿದ್ದರು.