ಸುದ್ದಿಬಿಂದು ಬ್ಯೂರೋ ವರದಿ

ಯಲ್ಲಾಪುರ: ಅಟ್ರಾಸಿಟಿ, ಕೊಲೆಯತ್ನ,ಸಾರ್ವಜನಿಕ ಸೊತ್ತಿಗೆ ಹಾನಿ ಸೇರಿದಂತೆ 16 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ನ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೆರೆ ಅರಣ್ಯಪ್ರದೇಶದಲ್ಲಿ ನಡೆದಿದೆ.

ಪ್ರವೀಣ್ ಮನೋಹರ್ ಸುಧೀರ್ (37) ಎಂಬಾತನೆ ಪೊಲೀಸರ ಮೇಲೆ ಹಲ್ಲೆ ಮಾಡಲು ಹೋಗಿ ತಪ್ಪಿಸಿಕೊಳ್ಳುವ ವೇಳೆ ಪೊಲೀಸರಿಂದ ಗುಂಡೇಟಿಗೆ ಒಳಗಾಗಿ ಬಂಧಿಸಲ್ಪಟ್ಟ ರೌಡಿಶೀಟರ್‌ ಆಗಿದ್ದಾನೆ, ಇಂದು ಸಂಜೆ ಸಮಯದಲ್ಲಿ ಯಲ್ಲಾಪುರ–ಹಳಿಯಾಳ ರಸ್ತೆಯ ಕಣ್ಣಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಆರೋಪಿ ಹಲ್ಲೆ ನಡೆಸಿದ ಸಂದರ್ಭದಲ್ಲೇ ಪೊಲೀಸ್, ಪಿಎಸ್‌ಐ ಮಹಾಂತೇಶ್ ನಾಯ್ಕ್ ಅವರು ತಕ್ಷಣದ ಆರೋಪಿ ಕಾಲಿಗೆ ಗುಂಡು ಹಾರಿಸುವ ಮೂಲಕ ತಮ್ಮ ಹಾಗೂ ಸಿಬ್ಬಂಧಿಗಳ ಮೇಲೆ ಆಗಬಹುದಾಗಿದ್ದ ಘಟನೆಯಿಂದ ಪಾರಾಗಿದ್ದಾರೆ.

16 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ
ಜೋಯಿಡಾ ತಾಲೂಕಿನ ರಾಮನಗರ ನಿವಾಸಿಯಾದ ಪ್ರವೀಣ್, ಕಳೆದ 16 ವರ್ಷಗಳಿಂದ ಗೂಂಡಾಗಿರಿ ನಡೆಸುತ್ತಿದ್ದಾನೆ.ಆತ ಜನರ ಮೇಲೆ ಹಲ್ಲೆ, ಸರ್ಕಾರಿ ನೌಕರರ ಮೇಲೆ ದೌರ್ಜನ್ಯ, ಕೊಲೆಯತ್ನ, ಸಾರ್ವಜನಿಕ ಸೊತ್ತಿಗೆ ಹಾನಿ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.ಆರೋಪಿಯ ವಿರುದ್ಧ ದಾಖಲಾಗಿರುವ 16 ಪ್ರಕರಣಗಳಲ್ಲಿ 9 ವಿಚಾರಣಾ ಹಂತದಲ್ಲಿವೆ.ಇತ್ತೀಚೆಗೆ ರಾಮನಗರದಲ್ಲಿ ಸಾಯೀಶ ಎಂಬ ಶಾಲಾ ಬಾಲಕನನ್ನು ಕತ್ತಿಯಿಂದ ಕೊಲ್ಲಲು ಯತ್ನಿಸಿದ ಪ್ರಕರಣವೂ ಆತನ ವಿರುದ್ಧ ದಾಖಲಾಗಿದೆ. ಈ ಕೇಸಿನಲ್ಲಿ ರಾಮನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ.

ಪೊಲೀಸರ ಮೇಲೆಯೇ ಹಲ್ಲೆ!
ಕಳೆದ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಪ್ರವೀಣ್‌ನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿರುವ ಈತ ಅವರ ಮೇಲೆಯೇ ಹಲ್ಲೆ ನಡೆಸಿದ್ದಾನೆ, ಕಣ್ಣಿಗೇರಿಯಲ್ಲಿ ಅವನನ್ನು ಹಿಡಿಯಲು ಯತ್ನಿಸಿದ ವೇಳೆ, ಆತ ಕಲ್ಲು ಮತ್ತು ಚೂರಿ ಹಿಡಿದು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಇದರಿಂದ ಪಿಎಸ್‌ಐ ಮಹಾಂತೇಶ್ ನಾಯ್ಕ್, ಕಾನ್ಸ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ ಹೊಸ್ಮನಿ, ಜಾಫರ್ ಅದರಗುಂಜಿ ಮತ್ತು ಅಸ್ಲಾಂ ಅವರಿಗೆ ಗಾಯವಾಗಿದೆ. ಈ ಸಂದರ್ಭದಲ್ಲಿ ಪಿಎಸ್‌ಐ ಮಹಾಂತೇಶ್ ಎರಡು ಸುತ್ತು ಗಾಳಿಯಲ್ಲಿ ಫೈರಿಂಗ್ ಮಾಡಿದ್ದಾರೆ, ಆದರೂ ಕೂಡ ಆರೋಪಿ ಪೊಲೀಸರ ಮೇಳೆ ದಾಳಿ ಮುಂದುವರೆಸಿದ್ದಾನೆ, ಇದರಿಂದಾಗಿ ಬಳಿಕ ಆರೋಪಿ ಪ್ರವೀಣ್‌ನ ಬಲಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಯನ್ನು ಹಿಡಿದು ಸ್ಥಳೀಯ ಯಲ್ಲಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ
ಘಟನೆಯ ಮಾಹಿತಿ ಪಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಪೊಲೀಸರು ಹಾಗೂ ಆರೋಪಿಯ ಆರೋಗ್ಯ ವಿಚಾರಿಸಿದ್ದಾರೆ.

ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಜಗದೀಶ್, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ರಾಮನಗರ ಪಿಎಸ್‌ಐ ಬಸವರಾಜ ಹಾಗೂ ಜೊಯಿಡಾ ಪಿಎಸ್‌ಐ ಚಂದ್ರಶೇಖರ್ ಉಪಸ್ಥಿತರಿದ್ದರು. ಪೊಲೀಸರು ನಡೆಸಿದ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ:ಗ್ಯಾರಂಟಿ ಯೋಜನೆ ಬಂದಾಗಿನಿಂದ NWKRTCಗೆ ಗ್ರಹಣ ಹಿಡಿದಂತಾಗಿದೆ’ – ಅನಂತಮೂರ್ತಿ ಹೆಗಡೆ