ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶಿರಸಿ ವಿಭಾಗದಲ್ಲಿ ವಾಯುವ್ಯ ರಸ್ತೆ ಸಾರಿಗೆ ಇಲಾಖೆ (NWKSRTC) ಬಸ್ ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಸಹ ಈ ಕುರಿತು ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ.ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಬಂದಾಗಿನಿಂದ NWKSRTCಗೆ ಗ್ರಹಣ ಹಿಡಿದಂತಾಗಿದೆ,ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರಸಿ ನಗರದ ವಾಯುವ್ಯ ರಸ್ತೆ ಸಾರಿಗೆ ವಿಭಾಗೀಯ ಕಛೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ನೀಡಿದ ನಂತರದಲ್ಲಿ ಕೆಎಸ್ಸಾರ್ಟಿಸಿ ಸಮಸ್ಯೆಗಳಿಂದ ತುಂಬಿಕೊಂಡಿದೆ. ಬಸ್ ಗಳ ಸರಿಯಾದ ನಿರ್ವಹಣೆ ಇಲ್ಲದೇ, ಮೆಕ್ಯಾನಿಕ್ ಗಳ ಕೊರತೆಯಿಂದ ಅಲ್ಲಲ್ಲಿ ಪದೆ ಪದೆ ಕೆಟ್ಟು ನಿಲ್ಲುತ್ತಿವೆ.ಎಷ್ಟೋ ಗ್ರಾಮೀಣ ಪ್ರದೇಶದ ಬಸ್ ಗಳು ವಾರದ ಬಹುತೇಕ ದಿನ ಕೆಟ್ಟು ನಿಲ್ಲುತ್ತಿವೆ. ರಸ್ತೆಯೂ ಸುಸ್ಥಿತಿಯಲ್ಲಿಲ್ಲ, ಬಸ್ ಗಳು ಸರಿಯಾದ ಸ್ಥಿತಿಯಲ್ಲಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಈ ಭಾಗದ ಜನರ, ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದೆಯಾ? ಜನರ ಜೀವಗಳಿಗೆ ಯಾರು ಜವಾಬ್ದಾರರು?ನಿಮ್ಮ ಅಧಿಕಾರದ ಚಟಕ್ಕೆ ಗ್ಯಾರಂಟಿ ನೀಡಿ ಜನರ ಜೀವಗಳ ಜೊತೆ ಯಾಕೆ ಆಟ ಆಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಶಿರಸಿ ಭಾಗದ ಜನರು ಸರಕಾರಿ ಸಾರಿಗೆಯಲ್ಲಿ ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಡಿಸಿ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ. NWKSRTC ಸಂಸ್ಥೆ ಹಾಗೂ ಸರಕಾರಕ್ಕೆ ಒಳ್ಳೆ ಮಾತಿನಿಂದ ಎಚ್ಚರಿಸುತ್ತಿದ್ದೇವೆ ಇನ್ನೊಂದು ವಾರದೊಳಗೆ ಮನವಿಯಲ್ಲಿ ತಿಳಿಸಿರುವ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ್ ಕುಪ್ಪಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿಯೇ ಪ್ರಯಾಣಿಸುವ ಬಸ್ ಗಳು ಹೋದಲೆಲ್ಲಾ ಕೆಟ್ಟು ನಿಲ್ಲುತ್ತಿವೆ. ಇದ್ದಕ್ಕೆ ಮುಖ್ಯವಾಗಿ ರಸ್ತೆ ಸರಿ ಇಲ್ಲದೆ ಇರುವುದೇ ಕಾರಣ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿ ಯಾವುದೇ ಅಭಿವೃದ್ದಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿಲ್ಲ. ಇದೆ ರೀತಿ ಹಳ್ಳಿಗಳಗೆ ಹಾಳಾದ ಬಸ್ ಗಳನ್ನೂ ಪುನಃ ಬಿಟ್ಟರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ. ಎಸ್ ಹೆಗಡೆ, ಬಿಸಲಕೊಪ್ಪ ಗ್ರಾ ಪಂ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯ್ಕ,ಮತ್ತೀಘಟ್ಟ ಗ್ರಾಪಂ ಸದಸ್ಯ ನಾರಾಯಣ ಹೆಗಡೆ ಸೇರಿದಂತೆ ಮತ್ತಿಘಟ್ಟ ಬಾಳೇಸರ ಭಾಗದ ಗ್ರಾಮಸ್ಥರು,ಪ್ರಮುಖರಾದ ಚಂದ್ರಕಾಂತ ಹೆಗಡೆ ನೇರ್ಲಹದ್ದ, ವಿ.ಎಂ.ಹೆಗಡೆ ಕಬ್ಬೆ, ಹಸರಗೋಡು ಗ್ರಾಪಂ ಅಧ್ಯಕ್ಷ ಪ್ರದೀಪ ಹೆಗಡೆ, ಬಾಳೇಸರ ಗ್ರಾಪಂ ಮಾಜಿ ಉಪಾಧ್ಯಕ್ಷ ಭಾಸ್ಕರ ನಾಯ್ಕ,ಪಿ ವಿ ಹೆಗಡೆ ಹೆಗಡೆಕಟ್ಟಾ, ಮಂಜುನಾಥ ಪೈ, ಗಣೇಶ ನಾಯ್ಕ, ಅಣ್ಣಪ್ಪ ಅಣಲೇಬೈಲ್, ಅಂಕಿತ್ ಶಿರಸಿ, ರಾಘವೇಂದ್ರ ದೇವಾಡಿಗ,ವಿನಯ ಹೆಗಡೆ ಸೇರಿದಂತೆ ಅನೇಕರು ಹಾಜರಿದ್ದರು.
ಇದನ್ನೂ ಓದಿ:-ಹನ್ಮಾವ್ ಕ್ರಾಸ್ ಬಳಿಯ ಗುಜರಿ ರಾಶಿಗೆ ತಕ್ಷಣ ಕ್ರಮ ಆಗಲಿ:ಇಲ್ಲವಾದರೆ ತೀವ್ರ ಹೋರಾಟ