ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್‌ರ ಚಾತುರ್ಮಾಸ್ಯ ವ್ರತಾಚರಣೆಯ ಎರಡನೇ ದಿನ ಕಾರ್ಯಕ್ರಮದಲ್ಲಿ ದೇವಗಿರಿ ಕೂಟದಿಂದ ಪಾದಪೂಜೆ ಮತ್ತು ಗುರು ಸೇವಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಮಧಾರಿ ಕೂಟವು ಚಾತುರ್ಮಾಸ್ಯ ವ್ರತಾಚರಣೆಯ ಎರಡನೇ ದಿನದ ಸೇವಾ ಕಾರ್ಯಗಳನ್ನು ವಹಿಸಿಕೊಂಡಿದ್ದು,ಬೆಳಗ್ಗೆಯೇ ಕೋನಳ್ಳಿಗೆ ಹಾಜರಾದ ದೇವಗಿರಿ ಕೂಟದ ಭಕ್ತರು ಚಕ್ಕಡಿ ಗಾಡಿಯಲ್ಲಿ ಹೊರಗಾಣಿಕೆ ರೂಪದಲ್ಲಿ ದವಸ-ಧಾನ್ಯ,ತರಕಾರಿಗಳನ್ನು ತಂದು ಗುರು ಸೇವೆಗೆ ಸಮರ್ಪಿಸಿದರು.ಸರದಿಯಲ್ಲಿ ಬಹಳ ಅಚ್ಚುಕಟ್ಟಾಗಿ ಆಗಮಿಸಿದ ಸದ್ಭಕ್ತರು ಸೇವಾ ಕಾರ್ಯಕ್ಕೆ ಕಂಕಣಬದ್ಧರಾಗಿ ಒಂದೊಂದು ಕಾರ್ಯದಲ್ಲಿ ನಿಯೋಜನೆಗೊಂಡರು.ಗುರುಗಳ ಪಾದ ಪೂಜೆಯನ್ನು ಕಾಂಗ್ರೆಸ್ ಯುವ ಮುಖಂಡ ಸಚಿನ್ ನಾಯ್ಕ ದಂಪತಿ ನೆರವೇರಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು,ಸಮಾಧಿಯಲ್ಲಿ ಏಂಟು ಮೆಟ್ಟಿಲುಗಳಿರುತ್ತದೆ.ಎಲ್ಲ ಮೆಟ್ಟಿಲಗಳನ್ನು ಏರಿದಾಗ ಮಾತ್ರ ಆನಂದ ಪ್ರಾಪ್ತವಾಗುತ್ತದೆ.ವಿವೇಕ ಮತ್ತು ವೈರಾಗ್ಯ ಭಕ್ತಿಯ ಎರಡು ಮಕ್ಕಳಿದ್ದಂತೆ.ಮೋಕ್ಷ ಮೊಮ್ಮಗನಿದ್ದಂತೆ ಎಂದ ಶ್ರೀಗಳು ಭಕ್ತಿ ಮಾರ್ಗದ ಮೂಲಕವೇ ಭಗವಂತನನ್ನು ಕಾಣಬಹುದು.ಭಗವಂತನ ನಾಮಸ್ಮರಣೆಯಿಂದಲೇ ಮನಸು ನಿರ್ಮಲವಾಗುತ್ತದೆ.ಹಾಗಾಗಿ ಎಲ್ಲರೂ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ನಾಮಸ್ಮರಣೆಯಲ್ಲಿ ಜೀವನದ ಆನಂದ ಪಡೆಯಿರಿ ಎಂದು ನುಡಿದರು.

ಈ ಸಂದರ್ಭದಲ್ಲಿ ದೇವಗಿರಿ ಭಾಗದ ನಾಮಧಾರಿ ಮುಖಂಡರಾದ ಎಸ್ ಟಿ ನಾಯ್ಕ,ಪಿ ಆರ್ ನಾಯ್ಕ, ಸಚಿನ್ ನಾಯ್ಕ, ಸುಧೀಶ್ ನಾಯ್ಕ,ರಾಜು ನಾಯ್ಕ,ಮಹೇಶ ನಾಯ್ಕ,ಎಂ ಡಿ ನಾಯ್ಕ,ಶಂಕರ ನಾಯ್ಕ,ಜಾನು ನಾಯ್ಕ,ಇತರರು ಇದ್ದರು.

ಇದನ್ನೂ ಓದಿ:ಲಂಚದ ಸರ್ಜನ್ ಗೆʼಪ್ರಮಫಷನ್”‌ : ಜೈಲು ಸೇರಿದ “ಶಿವ”..ಆನಂದ……!