ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ನಾಮಧಾರಿ ಸಮಾಜದ ನೇತೃತ್ವದಲ್ಲಿ ಎಲ್ಲ ಸಮಾಜಗಳ ಸಹಕಾರ ಪಡೆದು ಚಾತಾರ್ಮಾಸ್ಯ ವ್ರತಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಕರೆ ನೀಡಿದರು.
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಶ್ರೀಗಳು ಹಮ್ಮಿಕೊಂಡ ೪೨ ದಿನಗಳ ಚಾತುರ್ಮಾಸ್ಯ ವ್ರತಾಚರಣೆಗೆ ಗುರುವಾರ ಚಾಲನೆ ನೀಡಿದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಆಶೀರ್ವಚನ ನೀಡಿದರು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಶ್ರೀನಾರಾಯಣ ಗುರುಗಳು ಹೇಳಿದ್ದಾರೆ.ಎಲ್ಲ ಸಮುದಾಯಗಳನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಜೊತೆಗೆ ಒಗ್ಗಟ್ಟಿನಿಂದ ಬದುಕಬೇಕು.ಕೋನಳ್ಳಿ ಗ್ರಾಮದಲ್ಲಿ ಚಾತುರ್ಮಾಸ್ಯ ನಡೆಯುತ್ತಿದೆ ಎಂದರೆ ದೈವ ಸಂಕಲ್ಪ ಕಾರಣ. ಅಜಾತಶತ್ರುವಾದ ಎಚ್ ಆರ್ ನಾಯ್ಕ ಕೋನಳ್ಳಿ ಅವರು ತಮ್ಮದೆ ತಂಡ ಕಟ್ಟಿಕೊಂಡು, ಎಲ್ಲ ಸಮಾಜಗಳ ಸಹಕಾರ ಪಡೆದು ಚಾತುರ್ಮಾಸ್ಯ ನಡೆಸುವ ಜವಾಬ್ದಾರಿ ಹೊತ್ತಿಕೊಂಡಿರುವುದು ಗುರು ಸೇವೆ ಮಾಡುತ್ತಿದ್ದಾರೆ. ನಾಮಧಾರಿ ಸಮಾಜಬಾಂಧವರು ಧಾರ್ಮಿಕವಾಗಿ ಒಗ್ಗಟ್ಟಾದರೆ ಉಳಿದೆಲ್ಲ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಚಾತುರ್ಮಾಸ್ಯ ಎಂಬ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀಗಳು ಕರೆ ನೀಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ನಾರಾಯಣ ಗುರುಗಳ ಆಶಯದಂತೆ ಎಲ್ಲ ಸಮಾಜಗಳ ಮುಖಂಡರು ಸೇರಿ ಚಾತುರ್ಮಾಸ್ಯ ನಡೆಸುತ್ತಿರುವುದು ಖುಷಿಯ ಸಂಗತಿ. ನಮ್ಮ ಮಠ ಕೂಡ ಅನ್ನದಾನದ ಜೊತೆಗೆ ವಿದ್ಯಾ ದಾನ ಮಾಡುತ್ತಿದೆ. ನಾವು ಕೂಡ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೋನಳ್ಳಿಯಲ್ಲಿ ಧಾರ್ಮಿಕತೆಯ ಕಂಪು ಸೂಸುವಂತೆ ಚಾತುರ್ಮಾಸ್ಯ ಕಾರ್ಯಕ್ರಮವನ್ನು ನನ್ನ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವುದು ಖುಷಿಯ ಸಂಗತಿ. ಯಾವುದೇ ಸಮಸ್ಯೆಯಾಗದಂತೆ ಗುರುಗಳ ಚಾತುರ್ಮಾಸ್ಯ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ: ಪ್ರತಿಯೊಬ್ಬರು ಗುರು ಪರಂಪರೆಯನ್ನ ಬೆಳಸಿಕೊಳ್ಳಬೇಕು, ಅಂದಾಗ ಮಾತ್ರ ಪ್ರತಿಯೊಬ್ಬರನ್ನ ಗೌರವದಿಂದ ಕಾಣಲು ಸಾಧ್ಯ,ಇತ್ತಿಚ್ಚೀನ ದಿನದಲ್ಲಿ ಇಂದಿನ ಯುವಕರು ಇಂತಹ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿ,ಗುರುಗಳನ್ನ ಗೌರವಿಸುವ ಸಂಪ್ರದಾಯ ಇದ್ದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗಲು ಸಾಧ್ಯ ಎಂದರು.
ಶಾಸಕ ಭೀಮಣ್ಣ ನಾಯ್ಕ , ಶಾಸಕ ಹರೀಶ ಪುಂಜಾ, ಮಾತನಾಡಿ, ನಮ್ಮ ಗುರುಗಳಿಗೆ ೧೦೦೮ ಮಹಾಮಂಡಲೇಶ್ವರ ಪದವಿ ದೊರೆತ ಬಳಿಕ ನಡೆಯುತ್ತಿರುವ ಪ್ರಪ್ರಥಮ ಚಾತುರ್ಮಾಸ್ಯ ಕೋನಳ್ಳಿಯ ಕುಮಟಾಕ್ಕೆ ಪಾಪ್ತವಾದ ಹೆಗ್ಗಳಿಗೆ ಇನ್ಯಾರಿಗೂ ಸಿಗಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಚಾತುರ್ಮಾಸ್ಯಕ್ಕೆ ಭಾರೀ ಬೇಡಿಕೆ ಇರುವ ಯತಿಗಳಾದ ನಮ್ಮ ಗುರುಗಳು ಮಾತೃಹೃದಯಿ ಆಗಿದ್ದಾರೆ. ಅವರ ೪೨ ದಿನಗಳ ವ್ರತಾಚರಣೆಯಲ್ಲಿ ಭಕ್ತರು ಪಾಲ್ಗೊಂಡು ಗುರು ಸೇವೆಯ ಮೂಲಕ ಧನ್ಯತೆ ಪಡೆಯಿರಿ ಎಂದರು.
ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, ಗುರು ಪೂರ್ಣಿಮೆಯಂದು ಗುರು ದರ್ಶನ ಮಾಡುವ ಪುಣ್ಯ ಲಭಿಸಿದೆ.ಚಾತುರ್ಮಾಸ್ಯ ಕಾರ್ಯಕ್ರಮದ ಸಂಘಟನೆಯನ್ನು ಎಚ್ ಆರ್ ನಾಯ್ಕ ತಂಡ ಅಚ್ಚುಕಟ್ಟಾಗಿ ಮಾಡಿದೆ. ಗುರುಗಳ ಮೆರವಣಿಗೆಗೆ ವರುಣನ ಕೃಪೆಯಿರುವುದನ್ನು ಉಲ್ಲೇಖಿಸಿದ ಮುರಳೀಧರ ಪ್ರಭು ಅವರು ಶ್ರೀಗಳ ಪವಾಡದ ಬಗ್ಗೆ ಒತ್ತಿ ಹೇಳಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ್ ನಾಯ್ಕ ಸೋನಿ ಮಾತನಾಡಿ, ಚಾತುರ್ಮಾಸ್ಯದ ಮೂಲಕ ಗುರುಗಳ ಸೇವೆಯ ಭಾಗ್ಯ ದೊರೆತ್ತಿರುವುದು ನಮ್ಮೆಲ್ಲರ ಪುಣ್ಯ. ಭಟ್ಕಳದಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮ ನಮಗೆ ಪ್ರೇರಣೆಯಾಗಿದೆ. ಎಲ್ಲ ಸಮಾಜಗಳು ಭಾಗವಹಿಸಿ ಗುರುಗಳ ಚಾತುರ್ಮಾಸ್ಯವನ್ನು ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿಗಳು ಮತ್ತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳು ಎಸ್ ವೈದ್ಯ ಮಾತನಾಡಿ, ನಮ್ಮ ಗುರುಗಳು ದೇಶದ ಯಾವ ಮೂಲೆಯಲ್ಲಿ ಕಾರ್ಯಕ್ರಮ ನಡೆಸಿದರೂ ನಾನು ಅವರ ಜೊತೆ ನಿಲ್ಲುತ್ತೇನೆ, ಯಾವುದೇ ಕೊರತೆಯಾಗದಂತೆ ನಾವು ನಮ್ಮ ಗುರುಗಳ ಚಾತುರ್ಮಾಸ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ ಕೋನಳ್ಳಿ ದಂಪತಿ ಶ್ರೀಗಳ ಪಾದ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ, ರತ್ನಾಕರ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕ, ಇತರರು ಇದ್ದರು.
ಭವ್ಯ ಮೆರವಣಿಗೆ:
ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ೪೨ ದಿನಗಳು ನಡೆಯಲಿರುವ ನಾಮಧಾರಿ ಸಮಾಜದ ಕುಲಗುರುಗಳ ಚಾತುರ್ಮಾಸ್ಯ ವ್ರತಾಚರಣೆ ನಿಮಿತ್ತ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ನಾಮಧಾರಿ ಸಭಾಭವನಕ್ಕೆ ಆಗಮಿಸಿದ ಶ್ರೀಗಳನ್ನು ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕರು ಸ್ವಾಗತಿಸಿದರು. ಬಳಿಕ ಅಲ್ಲಿನ ಶ್ರೀ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾಧ ಸ್ವೀಕರಿಸಿ ರಥಾರೂಡರಾದ ಶ್ರೀಗಳನ್ನು ಭವ್ಯ ಮೆರವಣಿಗೆಯೊಂದಿಗೆ ಕುಮಟಾದಿಂದ ಕೋನಳ್ಳಿಗೆ ಕರೆದೊಯ್ಯಲಾಯಿತು.
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಆರ್ಯ ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಆರ್.ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಚಾತುರ್ಮಾಸ್ಯ ವ್ರತಾಚರಣಾ ಸಮಿತಿಯ ಅಧ್ಯಕ್ಷ ಎಚ್.ಆರ್.ನಾಯ್ಕ ಕೋನಳ್ಳಿ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಎಲ್. ನಾಯ್ಕ, ರತ್ನಾಕರ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಪುರಸಭಾ ಸದಸ್ಯ ಸಂತೋಷ ನಾಯ್ಕ, ದಿವಾಕರ ಅಘನಾಶಿನಿ, ಸಂಪತ್ ಕುಮಾರ್, ರಾಘವೇಂದ್ರ ನಾಯ್ಕ ಮೂರೂರು, ಇಂಜಿನೀಯರ್ ಕೇಶವ ನಾಯ್ಕ, ಚಾತುರ್ಮಾಸ್ಯ ವ್ರತಾಚರಣೆಯ ವಿವಿಧ ಸಮಿತಿಯ ಪ್ರಮುಖರು, ವಿವಿಧ ಸಮಾಜಗಳ ಮುಖಂಡು, ನಾಮಧಾರಿ ಸಮಾಜಬಂಧುಗಳು ಪಾಲ್ಗೊಂಡಿದ್ದರು.