ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ 42 ದಿನಗಳು ನಡೆಯಲಿರುವ ನಾಮಧಾರಿ ಸಮಾಜದ ಕುಲಗುರುಗಳ ಚಾತುರ್ಮಾಸ್ಯ ವ್ರತಾಚರಣೆ ನಿಮಿತ್ತ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಕುಮಟಾ ಪಟ್ಟಣದ ನಾಮಧಾರಿ ಸಭಾಭವನಕ್ಕೆ ಆಗಮಿಸಿದ ಶ್ರೀಗಳನ್ನು ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕರು ಸ್ವಾಗತಿಸಿದರು. ಬಳಿಕ ಅಲ್ಲಿನ ಶ್ರೀ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾಧ ಸ್ವೀಕರಿಸಿ ರಥಾರೂಡರಾದ ಶ್ರೀಗಳನ್ನು ಭವ್ಯ ಮೆರವಣಿಗೆಯೊಂದಿಗೆ ಕುಮಟಾದಿಂದ ಕೋನಳ್ಳಿಗೆ ಕರೆದೊಯ್ಯಲಾಯಿತು.ಸಹಸ್ರಾರು ಸಮಾಜ ಬಾಂಧವರೊಂದಿಗೆ ಭವ್ಯ ಮೆರವಣಿಗೆಯು ಪಟ್ಟಣದ ಗಿಬ್ ಸರ್ಕಲ್, ಹೆರವಟ್ಟಾ ವಾಲಗಳ್ಳಿ, ಕೂಜಳ್ಳಿ, ಮಲ್ಲಾಪುರ ಮೂಲಕ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದ ವರೆಗೆ ಸಾಗಿದ ಮೆರವಣಿಗೆಯಲ್ಲಿ ವಾದ್ಯಮೇಳಗಳು ಮೊಳಗಿದವು. ಶ್ರೀಗಳ ಭವ್ಯ ಮೆರವಣಿಗೆಯಲ್ಲಿ ನೂರಾರು ಕಾರು ಹಾಗೂ ಸಾವಿರಾರು ಬೈಕ್‍ಗಳ ಮೆರವಣಿಗೆ ಗಮನ ಸೆಳೆಯಿತು. ವಾದ್ಯಮೇಳಗಳು ಮೆರವಣಿಗೆ ಸಂಭ್ರಮಕ್ಕೆ ಕಳೆ ನೀಡಿದವು. ವಿವಿಧ ಸಮಾಜದ ಹಲವು ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಗುರುಗಳನ್ನು ಕಂಡ ಭಕ್ತಸಮೂಹ ಭಕ್ತಿಪರವಶರಾಗಿ ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದು ವಿಶೇಷವಾಗಿತ್ತು. ಗುರುಗಳ ಶಿಷ್ಯವರ್ಗ, ಭಕ್ತ ಸಮೂಹ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯಕ್ಕೆ ಬಂದ ಶ್ರೀಗಳನ್ನು ಮುತೈದೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡು ವೇದಿಕೆಗೆ ಕಳುಹಿಸಿಕೊಡುವ ಮೂಲಕ ಧನ್ಯತೆ ಮೆರೆದರು.

ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್‌ ವೈದ್ಯ, ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಆರ್ಯ ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಆರ್.ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಚಾತುರ್ಮಾಸ್ಯ ವ್ರತಾಚರಣಾ ಸಮಿತಿಯ ಅಧ್ಯಕ್ಷ ಎಚ್.ಆರ್.ನಾಯ್ಕ ಕೋನಳ್ಳಿ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಎಲ್. ನಾಯ್ಕ, ರತ್ನಾಕರ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಪುರಸಭಾ ಸದಸ್ಯ ಸಂತೋಷ ನಾಯ್ಕ, ದಿವಾಕರ ಅಘನಾಶಿನಿ, ಸಂಪತ್ ಕುಮಾರ್, ರಾಘವೇಂದ್ರ ನಾಯ್ಕ ಮೂರೂರು, ಇಂಜಿನೀಯರ್ ಕೇಶವ ನಾಯ್ಕ, ಚಾತುರ್ಮಾಸ್ಯ ವ್ರತಾಚರಣೆಯ ವಿವಿಧ ಸಮಿತಿಯ ಪ್ರಮುಖರು, ವಿವಿಧ ಸಮಾಜಗಳ ಮುಖಂಡು, ನಾಮಧಾರಿ ಸಮಾಜಬಂಧುಗಳು ಪಾಲ್ಗೊಂಡಿದ್ದರು.

ಇದನ್ನೂ‌ ಓದಿ:ಲಂಚ ಪಡೆಯುತ್ತಿದ್ದ ಸರ್ಜನ್‌ಗೂ ‘ಆಪರೇಷನ್‌’ ಮಾಡಿದ ಲೋಕಾಯುಕ್ತ! ಶಿವಾನಂದ ಕುಡ್ತಾಲಕರ್ ಲೋಕಾ ಬಲೆಗೆ