ಸುದ್ದಿಬಿಂದು ಬ್ಯೂರೋ ವರದಿ
ನಾಗ್ಪುರ: ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವುದು ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಅದನ್ನು ಲೈಂಗಿಕ ಉದ್ದೇಶಕ್ಕೆ ತಕ್ಕಂತೆ ಪರಿಗಣಿಸಬಾರದು ಎಂಬ ಮಹತ್ವದ ತೀರ್ಪನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ನೀಡಿದೆ.

2015 ರಲ್ಲಿ 17 ವರ್ಷದ ಹದಿಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಪ್ಪಿತಸ್ಥನಾಗಿ ಘೋಷಿಸಲಾಗಿದ್ದ 35 ವರ್ಷದ ವ್ಯಕ್ತಿಯನ್ನು ಹೈಕೋರ್ಟ್ ಬಿಡುಗಡೆಗೊಳಿಸಿದೆ. ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ನೇತೃತ್ವದ ಪೀಠ, ನೀಡಿದ ತೀರ್ಪಿನಲ್ಲಿ, “ಐಪಿಸಿ ಅಥವಾ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪ ಸಾಬೀತಾಗಬೇಕಾದರೆ, ಅನುಚಿತ ಸ್ಪರ್ಶ, ಬಲವಂತವಾಗಿ ಬಟ್ಟೆ ತೆಗೆಯುವುದು, ಅಸಭ್ಯ ಸನ್ನೆ ತೋರಿಸುವುದು ಅಥವಾ ಮಹಿಳೆಯ ನಮ್ರತೆಯ ಅವಮಾನ ಸೇರಿರಬೇಕು. ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಘಟನೆ ಹಿನ್ನಲೆ:
ಆರೋಪಿಯು 2015ರಲ್ಲಿ ನಾಗ್ಪುರದಲ್ಲಿ 17 ವರ್ಷದ ಬಾಲಕಿಯನ್ನು ತಡೆದು, ಆಕೆಯ ಕೈ ಹಿಡಿದು “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದ. ಈ ಘಟನೆ ಹಿನ್ನೆಲೆಯಲ್ಲಿ 2017ರಲ್ಲಿ ಸೆಷನ್ಸ್ ನ್ಯಾಯಾಲಯವು ಆರೋಪಿಯನ್ನು ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತ್ತು. ಆದರೆ ಹೈಕೋರ್ಟ್, ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಪ್ರಕರಣದಲ್ಲಿ ಯಾವುದೇ ಲೈಂಗಿಕ ಉದ್ದೇಶ ಅಥವಾ ಕೃತ್ಯವಿಲ್ಲವೆಂದು ನಿರ್ಧರಿಸಿ, ಆರೋಪಿಯನ್ನು ಖುಲಾಸೆಗೊಳಿಸಿದೆ.

ಇದನ್ನೂ ಓದಿ :ವಾಯುವ್ಯ ಕರ್ನಾಟಕ ಸಾರಿಗೆ ಶಿರಸಿ ವಿಭಾಗದಲ್ಲಿ ಚಾಲಕರ ನೇಮಕಾತಿಗೆ ಅರ್ಜಿ ಆಹ್ವಾನ