ಸುದ್ದಿಬಿಂದು ಬ್ಯೂರೋ‌ ವರದಿ
ದಾಂಡೇಲಿ : ತಾಲೂಕಿನ ಬರ್ಚಿ – ಗಣೇಶಗುಡಿ ರಸ್ತೆಯಲ್ಲಿರುವ ಹರೇಗಾಳಿಯಲ್ಲಿ ದ್ವಿಚಕ್ರ ವಾಹನ ಒಂದಕ್ಕೆ ಬೊಲೆರೋ ಗೂಡ್ಸ್ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಅಂಬೇವಾಡಿ ನಿವಾಸಿ ರೋಹಿತ್ ಬಸವರಾಜ ಹರಿಜನ ಎಂಬಾತ ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ದ್ವಿಚಕ್ರ ವಾಹನದಲ್ಲಿ ದಾಂಡೇಲಿಯಿಂದ ಗಣೇಶಗುಡಿಗೆ ಹೋಗುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಬೊಲೊರೊ ಗೂಡ್ಸ್ ವಾಹನ ಯಾವುದೇ ಸಿಗ್ನಲ್ ನೀಡದೆ ಹರೇಗಾಳಿ ಕ್ರಾಸ್ ರಸ್ತೆಗೆ ತಿರುಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಗೊಂಡ ಯುವಕನನ್ನು ತಕ್ಷಣವೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಕ್ಯಾಂಪರ್ ವಾಹನದವರು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ರೋಹಿತನ ತಲೆ, ಕಿವಿಯ ಭಾಗಕ್ಕೆ ಮತ್ತು ಕಾಲಿಗೆ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ತಪ್ಪದೇ ಓದಿ