suddibindu.in
ಅಂಕೋಲಾ : ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡಕುಸಿತ ಪ್ರಕರಣ ಸಂಭವಿಸಿ 13 ದಿನಗಳು ಕಳೆದಿವೆ. ಇಷ್ಟು ದಿನ ಕಣ್ಮರೆಯಾದವರಿಗಾಗಿ ನೆಲ ಹಾಗೂ ನದಿಯಲ್ಲಿ ನಡೆದಿದ್ದ ಹುಡುಕಾಟಕ್ಕೆ ಇಂದು ಬ್ರೇಕ್ ಬಿದ್ದಿದೆ. ನಾಪತ್ತೆಯಾಗಿರುವ ಇನ್ನೂ ಮೂವರು ಸಿಗದಿದ್ದರೂ ಸಹ ನದಿಯಲ್ಲಿನ ಅಡೆತಡೆಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳ್ಳುವಂತಾಗಿದೆ.
ಉತ್ತರಕನ್ನಡ ಜಿಲ್ಲೆಯ ಶಿರೂರಿನ ಗುಡ್ಡಕುಸಿತ ಪ್ರಕರಣ ಇಡೀ ರಾಜ್ಯದಲ್ಲೇ ಸದ್ದು ಮಾಡಿದ ಘಟನೆ. ದುರ್ಘಟನೆ ಸಂಭವಿಸಿ 13 ದಿನಗಳು ಕಳೆದಿದ್ದು ಅವಘಡದಲ್ಲಿ ಕಣ್ಮರೆಯಾಗಿದ್ದ 11ಮಂದಿ ಪೈಕಿ ಇದುವರೆಗೆ 8 ಮಂದಿಯ ಶವ ಪತ್ತೆಯಾಗಿದೆ. ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ಹಾಗೂ ಕೇರಳದ ಲಾರಿ ಮತ್ತು ಚಾಲಕ ಅರ್ಜುನ್ ನದಿಯಲ್ಲೇ ಇರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಗಂಗಾವಳಿ ನದಿಯಲ್ಲಿ ಶೋಧ ಆರಂಭಿಸಿದ್ದು, ನಿನ್ನೆ ಉಡುಪಿಯ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿತ್ತು. ಡ್ರೋನ್ ಸ್ಕ್ಯಾನಿಂಗ್ನಲ್ಲಿ ನೀಡಲಾಗಿದ್ದ ನಾಲ್ಕು ಜಾಗಗಳ ಪೈಕಿ ಮೂರರಲ್ಲಿ ಶೋಧ ನಡೆಸಿದ್ದ ತಂಡ ಇಂದು ಕೊನೆಯ ಪ್ರಯತ್ನ ಎನ್ನುವಂತೆ ನಾಲ್ಕನೇ ಜಾಗದಲ್ಲೂ ಶೋಧ ನಡೆಸಿತ್ತಾದರೂ ಯಾವ ಸುಳಿವೂ ಸಿಗದೇ ನಿರಾಸೆಯಿಂದ ಕಾರ್ಯಾಚರಣೆ ನಿಲ್ಲಿಸಿದೆ.
ಇದನ್ನೂ ಓದಿ
- ED ಬಂಧನಕ್ಕೆ ಒಳಗಾದ ಶಾಸಕ ಸತೀಶ್ ಸೈಲ್ ಸೆಪ್ಟೆಂಬರ್ 12ರವರೆಗೆ ಕಸ್ಟಡಿ
- Karwar Krims Hospital /ಉತ್ತರ ಕನ್ನಡಕ್ಕೆ ಹೆಮ್ಮೆ: 450ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಕಟ್ಟಡ ಸಿದ್ಧ
- Gold price today /ಚಿನ್ನದ ದರದಲ್ಲಿ ದಾಖಲೆ ಏರಿಕೆ : ಖರೀದಿದಾರರಿಗೆ ಶಾಕ್, ಹೂಡಿಕೆದಾರರಿಗೆ ಚಾನ್ಸ್
ಗಂಗಾವಳಿಯ ಮೂರು ಸ್ಥಳಗಳಲ್ಲಿ ಡೈವಿಂಗ್ ಮಾಡಿದ್ದ ಈಶ್ವರ ಮಲ್ಪೆ ತಂಡ ನದಿಯಲ್ಲಿ ಬೃಹದಾಕಾರದ ಬಂಡೆಗಳು, ಮರದ ತುಂಡುಗಳು ಹಾಗೂ ಹೈಟೆನ್ಶನ್ ವಿದ್ಯುತ್ ತಂತಿಗಳು ಇರುವುದನ್ನ ತಿಳಿಸಿತ್ತು. ನದಿಯ ಹರಿವು ಸಹ ಹೆಚ್ಚಿದ್ದು ನೀರಿನೊಳಗೆ ಏನೂ ಕಾಣಿಸದ ಪರಿಸ್ಥಿತಿ ಇರುವುದರಿಂದಾಗಿ ಕಾರ್ಯಾಚರಣೆ ಅಡ್ಡಿಯಾಗುತ್ತಿದೆ ಎಂದಿದ್ದರು. ಇಂದು ಎನ್ಡಿಆರ್ಎಫ್ನ ಡೈವರ್ನೊಂದಿಗೆ ಈಶ್ವರ್ ಮಲ್ಪೆ ಡೈವ್ ಮಾಡಿದ್ದು, ಈ ವೇಳೆ 300 ಮೀಟರ್ ಆಳದವರೆಗೆ ಇಳಿದರೂ ಸಹ ಕೇವಲ ಮರ, ಕಲ್ಲುಗಳೇ ಕಂಡುಬಂದಿದ್ದು ಲಾರಿಯ ಸುಳಿವು ಸಿಗದೇ ಡೈವಿಂಗ್ ತಂಡ ವಾಪಸ್ಸಾಗಿದ್ದು ಈಶ್ವರ್ ಸಹ ಬೇಸರ ವ್ಯಕ್ತಪಡಿಸಿದ್ರು.ಇನ್ನು ಡೈವಿಂಗ್ ಕಾರ್ಯಾಚರಣೆ ವಿಫಲವಾಗಿದ್ದರಿಂದಾಗಿ ಸದ್ಯಕ್ಕೆ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಾಚರಣೆ ಸ್ಥಗಿತಗೊಂಡಿಲ್ಲ, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಾಚರಣೆ ಮುನ್ನಡೆಸುವ ಕುರಿತು ತೀರ್ಮಾನ ಕೈಗೊಳ್ಳೋದಾಗಿ ತಿಳಿಸಿದ್ದಾರೆ.
ಕಳೆದ 13 ದಿನಗಳಿಂದ ನಿರಂತರವಾಗಿ ನಡೆದ ಶಿರೂರು ಗುಡ್ಡಕುಸಿತ ಕಾರ್ಯಾಚರಣೆ ಇಂದು ಅನಿವಾರ್ಯವಾಗಿ ಸ್ಥಗಿತಗೊಂಡಂತಾಗಿದೆ. ಶೋಧಕಾರ್ಯ ಸ್ಥಗಿತದಿಂದಾಗಿ ನಾಪತ್ತೆಯಾದವರ ಕುಟುಂಬಸ್ಥರಿಗೆ ದಿಕ್ಕುತೋಚದಂತಾಗಿದ್ದು ಕಣ್ಮರೆಯಾದವರ ಪತ್ತೆಗೆ ಜಿಲ್ಲಾಡಳಿತ ಮುಂದೆ ಯಾವ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.