suddibindu. in
ಶಿರಸಿ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು? ಹೋರಾಟದ ನೇತೃತ್ವ ವಹಿಸಿದ್ದ ಕಾಗೇರಿಯವರಂಥ ನಾಯಕರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ. ಇವರು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು? ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.
‘ಪರೇಶ್ ಮೇಸ್ತಾ ಪ್ರಕರಣದಲ್ಲಿ ಐಜಿ ಹೇಮಂತ್ ನಿಂಬಾಳ್ಕರ್ ಹೊಂದಾಣಿಕೆ ಮಾಡಿಕೊಂಡಿದ್ದರು’ ಎಂಬ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಹುಲೇಕಲ್ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರು ಈಗ ದಿನವೂ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಸದ್ಯ ಅವರಿಗೆ ಬೇರೆ ಕೆಲಸವಿಲ್ಲವಾಗಿದೆ. ನಾನೊಬ್ಬಳು ಹೆಣ್ಣೆಂದು ನನ್ನ ಮತ್ತು ನನ್ನ ಕುಟುಂಬವನ್ನ ಗುರಿಯಾಗಿಸಿ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ
- ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ : ಶಿವರಾಮ ಹೆಬ್ಬಾರ್ ಬಣಕ್ಕೆ ಗೆಲುವು
- ಉತ್ತರ ಕನ್ನಡ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣ ! ಶಿವರಾಮ ಹೆಬ್ಬಾರ್ – ಮಂಕಾಳ ವೈದ್ಯರ ನಡುವೆ ತೀವ್ರ ಪೈಪೋಟಿ
- ಉತ್ತರ ಕನ್ನಡದಲ್ಲಿ ನಿರಂತರ ಮಳೆ : ಶಾಲೆಗಳಿಗೆ ಇಂದು ರಜೆ
ಮೇಸ್ತಾ ಪ್ರಕರಣದಲ್ಲಿ ನನ್ನ ಗಂಡನ ಮೇಲೆ ಈಗ ಕಾಗೇರಿಯವರು ಆರೋಪ ಹೊರಿಸಿದ್ದಾರೆ. ಕಾಗೇರಿಯವರು ಅಂದು ಈ ಭಾಗದ ಶಾಸಕರಾಗಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೆವು ಎನ್ನುತ್ತಾರೆ. ಹಾಗಿದ್ದರೆ ಆ ಪ್ರಕರಣದಲ್ಲಿ ಹಿಂದುಳಿದ ವರ್ಗದ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ಆಗಿದೆ, ಹೋರಾಟ ನಡೆಸಿದ ನಿಮ್ಮಂಥ ನಾಯಕರ ಮೇಲೆ ಯಾಕೆ ಆಗಿಲ್ಲ? ನನ್ನ ಗಂಡ ಹೊಂದಾಣಿಕೆ ಮಾಡಿಕೊಂಡಿದ್ದರೆನ್ನುವ ಕಾಗೇರಿಯವರೇ, ನಿಮ್ಮ ಮೇಲೆ ಕೇಸಾಗದಂತೆ ಪೊಲೀಸರ ಜೊತೆ ಯಾವ ಹೊಂದಾಣಿಕೆ ಇತ್ತು? ನಮ್ಮನ್ನ ಬಿಡಿ, ನಮ್ಮ ಹುಡುಗರನ್ನ ಎಳೆದೊಯ್ಯಿರಿ ಎಂದು ಬೆಂಕಿ ಹಚ್ಚಿದವರು ಬಿಜೆಪಿಗರು ಎಂದು ವಾಗ್ದಾಳಿ ನಡೆಸಿದರು.
ಸಿಬಿಐನಿಂದ ಈ ಪ್ರಕರಣದ ತನಿಖೆಯಾದರೂ ಸಹಜ ಸಾವೆಂದು ವರದಿ ಬಂತು. ವರದಿ ಬಂದ ಬಳಿಕ ಯಾರಾದರೂ ಆ ತಾಯಿಯ ಬಗ್ಗೆ ಕೇಳಲು ಹೋದರಾ? ಆದರೆ ಗ್ಯಾರಂಟಿ ನೀಡಿ ಆ ಬಡ ಕುಟುಂಬಕ್ಕೆ ಜೀವನ ನಡೆಸುವಂತೆ ಮಾಡಿದವರು ನಾವು. ಅವರು ಬೆಂಕಿ ಹಚ್ಚಲಿ, ಅದಕ್ಕೆ ನಾವು ನೀರು ಹಾಕುವ ಕೆಲಸ ಮಾಡುತ್ತಿರುತ್ತೇವೆ ಎಂದು ತಿರುಗೇಟು ನೀಡಿದರು.
ಆರು ಬಾರಿ ಶಾಸಕರಾದವರಿಗೆ, ಮಂತ್ರಿ, ಸ್ಪೀಕರ್ ಆದವರಿಗೆ ಇಂಥ ಹೇಳಿಕೆಗಳು ಶೋಭೆ ತರಲ್ಲ. ಒಬ್ಬ ಯುವಕನ ಸಾವನ್ನ ರಾಜಕೀಯಕ್ಕೆ ಬಳಸುತ್ತಿರುವುದು ಖಂಡನೀಯ. ಬಿಜೆಪಿಗರ ಇಂಥ ಭಾವನಾತ್ಮಕ ವಿಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.




