suddibindu.in
ಶಿರಸಿ: ಪರೇಶ್ ಮೇಸ್ತಾನೆಂಬ ಯುವಕನ ಸಾವಿನ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ಹೇಳಿಕೆ ಖಂಡನೀಯ. ಅವರಿಂದ ಇಂಥ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕಿಡಿಕಾರಿದ್ದಾರೆ.
‘ಪರೇಶ್ ಮೇಸ್ತಾ ಪ್ರಕರಣದಲ್ಲಿ ಐಜಿಪಿ ಹೇಮಂತ್ ನಿಂಬಾಳ್ಕರ್ ಹಸ್ತಕ್ಷೇಪವಿತ್ತಿ’ ಎಂಬ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಹುಲೇಕಲ್ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಜಿಲ್ಲಾ ಉಸ್ತುವಾರಿ ಇದ್ದ ಸಂದರ್ಭದಲ್ಲಿ ಪರೇಶ್ ಮೇಸ್ತಾ ಪ್ರಕರಣ ನಡೆದಿತ್ತು. ಆದರೆ ಅದು ಸಹಜ ಸಾವಲ್ಲ, ಕೊಲೆ ಎಂದು ಎಂದು ಬಿಜೆಪಿಗರು ಗಲಾಟೆ ಮಾಡಿದರು. ಸ್ಥಳಕ್ಕೆ ನಾನೂ ಭೇಟಿ ನೀಡಿದ್ದೆ, ಇಡೀ ರಾತ್ರಿ ಸಭೆ ಮಾಡಿದ್ದೆ. ಕೆಲವರು ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಂಡರು. ಪೊಲೀಸರು ಕರ್ತವ್ಯ ನಿಭಾಯಿಸಿದರು. ಅಂದಿನ ಐಜಿ ಕೂಡ ಹೊನ್ನಾವರಕ್ಕೆ ಬಂದಿದ್ದರು. ಅವರ ಕಾರಿಗೆ ಬೆಂಕಿ ಹಚ್ಚಿದರು. ಸುದೈವಶಾತ್ ಐಜಿ ಅಪಾಯದಿಂದ ಪಾರಾದರು ಎಂದು ವಿವರಿಸಿದರು.
ಇದನ್ನೂ ಓದಿ
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
ಬಿಜೆಪಿಗರ ಒತ್ತಾಯದ ಮೇರೆಗೆ ಕಾಗೇರಿಯವರ ಪಕ್ಷದ ಅಧೀನದಲ್ಲಿರುವ ಸಿಬಿಐಗೆ ಪ್ರಕರಣ ಹಸ್ತಾಂತರಿಸಿದಾಗ ‘ಇದು ಸಹಜ ಸಾವು, ಕೊಲೆಯಲ್ಲ’ ಎಂದು ವರದಿ ನೀಡಿದರು. ಆ ವರದಿ ಬಂದು ಎಷ್ಟೋ ವರ್ಷವಾಗಿದೆ. ಆದರೆ ಇಷ್ಟು ವರ್ಷ ಮಲಗಿದ್ದ ಕಾಗೇರಿ ಈಗ ಯಾಕೆ ಎದ್ದರು? ಜವಾಬ್ದಾರಿ ಸ್ಥಾನದಲ್ಲಿರುವ, ಹಿರಿಯ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇದು ಶೋಭೆ ತರುವುದಿಲ್ಲ. ಅವರಿಂದ ಇಂಥ ಕೀಳು ಮಟ್ಟದ ಹೇಳಿಕೆ ಅಪೇಕ್ಷಿಸಿರಲಿಲ್ಲ ಎಂದು ಬೇಸರಿಸಿದರು.
ಈ ಪ್ರಕರಣದ ಕುರಿತು ಅವರು ಕರೆದ ವೇದಿಕೆಗೆ ನಾನು ಚರ್ಚೆಗೆ ಬರಲು ಸಿದ್ಧ. ಕಾಗೇರಿ ಹೇಳಕೆಯಿಂದ ಮನಸ್ಸಿಗೆ ನೋವಾಗಿದೆ. ಆತ ಮೊದಲೇ ಮಾತನಾಡುವುದಿಲ್ಲ, ಅಭಿವೃದ್ಧಿ ಮಾಡಿಯೂ ಗೊತ್ತಿಲ್ಲ. ಆದರೆ ಇಂಥ ಹೇಳಿಕೆಯಿಂದ ಮತ ಬರುತ್ತದೆಂದು ಅಂದುಕೊಂಡಿದ್ದರೆ ಅದು ಮೂರ್ಖತನ. ಮತದಾರರು ಜಾಣರಿದ್ದಾರೆ. ಇದರಿಂದ ಬಿಜೆಪಿ ಮತ ಕಡಿಮೆಯಾಗಬಹುದು ವಿನಾ ಹೆಚ್ಚಾಗಲ್ಲ. ಒಬ್ಬ ಜನಪ್ರತಿನಿಧಿಯಾಗುವ ವ್ಯಕ್ತಿಯಿಂದ ಇದನ್ನ ನಿರೀಕ್ಷಿಸಿರಲಿಲ್ಲ ಎಂದರು.