ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ವೈಭವ ಪ್ಯಾಲೇಸ್‌ನಲ್ಲಿ ವಿಶ್ವ ಮಾನವ ಹಕ್ಕುಗಳ ಕುಮಟಾ ಘಟಕದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಡಬ್ಲುಎಚ್ ಆರ್ ಆರ್ ಕೆ ಫೌಂಡೇಷನ್‌ನ ವಿಶ್ವ ಮಾನವ ಹಕ್ಕುಗಳ ಕುಮಟಾ ಘಟಕದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರು ನೆರವೇರಿಸಿದರು. ಎರಡನೇ ವಿಶ್ವ ಮಹಾಯುದ್ಧದ ಭೀಕರತೆಯನ್ನು ನೋಡಿದ ಜಗತ್ತಿನ ರಾಷ್ಟ್ರಗಳೆಲ್ಲ ಸೇರಿಕೊಂಡು ಇನ್ಮುಂದೆ ಯುದ್ಧವೇ ಆಗಬಾರದೆಂಬ ಸದುದ್ದೇಶದಿಂದ ಇಡೀ ಜಗತ್ತಿನಲ್ಲಿ ವಿಶ್ವ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಯಿತು.
ಅಲ್ಲಿಂದ ಹುಟ್ಟಿದ ಈ ಮಾನವ ಹಕ್ಕುಗಳ ಕರ್ನಾಟಕ ಪಶ್ಚಿಮ ಭಾಗದ ಮಹಿಳಾ ಅಧ್ಯಕ್ಷೆ ಅರ್ಚನಾ ಜನಪ್ರಕಾಶ ನಾಯಕ ಮಾತನಾಡಿ, ತಮ್ಮ ಸಂಸ್ಥೆಯ ಧ್ಯೇಯ, ಉದ್ದೇಶವನ್ನು ವಿವರಿಸುವ ಜೊತೆಗೆ ಮಾನವ ಹಕ್ಕುಗಳ ಸಂಘಟನೆಯ ಮೂಲಕ ನೊಂದವರ, ಅನ್ಯಾಯಕ್ಕೊಳಗಾಗುವವರಿಗೆ ಕಾನೂನು ರೀತಿಯಲ್ಲಿ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕೆ ಹೊರತು ಎಲ್ಲಿಯೂ ಜಬರ್‌ದರ್ಸಿ ಮಾಡದಂತೆ ಎಚ್ಚರಿಸಿದರು.
ಬಿಜೆಪಿ ಶಿಕ್ಷಣ ಪ್ರಕೋಷ್ಠಾದ ರಾಜ್ಯ ಪ್ರಭಾರಿ ಎಂ ಜಿ ಭಟ್ ಮಾತನಾಡಿ, ನಾವೆಲ್ಲ ಹೋರಾಟದ ಹಾದಿಯಲ್ಲಿಯೇ ಇದ್ದವರು.ನಮ್ಮ ಜಿಲ್ಲೆಯ ಜನರಲ್ಲಿ ಹೋರಾಟದ ಮನೋಭಾವ ಇಲ್ಲ. ಅದರಲ್ಲೂ ಯುವ ಜನತೆಯಂತ್ತೂ ನಮ್ಮದೆ ಲೋಕದಲ್ಲಿ ಮುಳುಗಿರುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವ ಜನತೆ ಜಾಗೃತರಾಗಬೇಕು. ಜಾತಿ, ಧರ್ಮ, ಪಕ್ಷವನ್ನು ಬಿಟ್ಟು ಹೋರಾಡುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ನಮ್ಮ ತಾಲೂಕು, ಜಿಲ್ಲೆ ಅಭಿವೃದ್ಧಿ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಾನವ ಹಕ್ಕುಗಳ ಕುಮಟಾ ಘಟಕ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು
ವಕೀಲ ನಾಗರಾಜ ಹೆಗಡೆ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಮಾತನಾಡಿ, ಮಾನವ ಹಕ್ಕುಗಳ ಕುಮಟಾ ಘಟಕದ ಜನಪರ ಹೋರಾಟಕ್ಕೆ ನಾವೆಲ್ಲ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಮತ್ತು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ,ಹೋರಾಟದ ಜೊತೆಗೆ ಬೇಡಿಕೆಯ ಗುರಿ ತಲುಪುವ ದೃಢ ಸಂಕಲ್ಪ ಇರಬೇಕು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಎಷ್ಟೆ ಹೋರಾಟ ನಡೆಸಿದ್ದೇವೆ. ಆದರೆ ಈತನಕ ಆಗಿಲ್ಲ. ಹಾಗಂತ ಸುಮ್ಮನಿರದೇ ಸಮಾನ ಮನಸ್ಕರೆಲ್ಲ ಸೇರಿಕೊಂಡು ನೂರಾರು ಜನರ ತಂಡ ರಚಿಸಿ,ಒಗ್ಗಟ್ಟಾಗಿ ಪ್ರಯತ್ನಿಸಿದರೆ ಏನನ್ನಾದರೂ ಸಾಧಿಸಬಹುದು. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಶೀಲರಾಗೋಣ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು
ಕುಮಟಾ ಪುರಸಭೆ ಮಾಜಿ ಅಧ್ಯಕ್ಷೆ ದಾಕ್ಷಾಯಿಣಿ ಅರಿಗ, ರಾಮಚಂದ್ರ ಎಸ್ ಗೌಡ, ಮಾಲಿನಿ ಗೌಡ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ವಿಶ್ವ ಮಾನವ ಹಕ್ಕುಗಳ ಕುಮಟಾ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕುಮಟಾ ತಾಲೂಕು ಅಧ್ಯಕ್ಷರಾಗಿ ಮಹೇಂದ್ರ ನಾಯ್ಕ, ಉಪಾಧ್ಯಕ್ಷರಾಗಿ ಅಣ್ಣಪ್ಪ ಕುಮಟಾ, ಸಹ ಕಾರ್ಯದರ್ಶಿ ಸುನೀಲ ಹರಿಕಂತ್ರ, ಕಾರ್ಯದರ್ಶಿ ಬಾಲಕೃಷ್ಣ ಮೂರೂರು, ಜಿಲ್ಲಾ ಸಮಿತಿ ಸದಸ್ಯರಾಗಿ ಮಂಜುನಾಥ ಪಟಗಾರ, ನಾಗರಾಜ ಹೆಗಡೆ, ಶಶಿಧರ ಅಡಿಗುಂಡಿ, ಜಗದೀಶ ಪಟಗಾರ, ಸುನೀಲ ಅಳ್ವೆಕೋಡಿ, ರಾಮಚಂದ್ರ ಗೌಡ, ದಿನೇಶ ಭಂಡಾರಿ, ನಾಗರತ್ನ ಮುಕ್ರಿ, ಚಿದಾನಂದ ಅಂಬಿಗ್, ಪಾಂಡು ಪಟಗಾರ, ಶಿವಾನಂದ ಮುಕ್ರಿ, ಶಾಂತಾರಾಮ ನಾಯ್ಕ ಹೆಗಡೆ ಸೇರಿದಂತೆ ಇತರರಿಗೆ ಸಂಘದ ಐಡಿ ಕಾರ್ಡ್ ವಿತರಿಸಿ, ಅಧಿಕಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಟಾ ಘಟಕದ ಅಧ್ಯಕ್ಷ ಮಹೇಂದ್ರ ನಾಯ್ಕ ಸ್ವಾಗತಿಸಿದರು. ರಾಮಚಂದ್ರ ಅಂಬಿಗ್ ಪ್ರಾರ್ಥಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಮಹಾಬಲೇಶ್ವರ ನಾಯ್ಕ ವಂದಿಸಿದರು. ತಾಪಂ ಮಾಜಿ ಸದಸ್ಯ ಬಾಲಕೃಷ್ಣ ನಾಯ್ಕ, ಅಣ್ಣಪ್ಪ ನಾಯ್ಕ ಇತರರು ಸಹಕರಿಸಿದರು.
ಇದನ್ನೂ ಓದಿ