ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರ ಗೂಂಡಾಗಿರಿ ಮಿತಿಮೀರಿದೆ. ಅಕ್ರಮ ಮರಳುಗಾರಿಕೆ ಕಡಿವಾಣ ಹಾಕಲು ಬಂದ ಅಧಿಕಾರಿಗಳನ್ನೆ ದಿಗ್ಬಂಧನಕ್ಕೊಳಪಡಿಸಿ, ಬೆದರಿಸಿರುವುದಲ್ಲದೇ ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ವ್ಯಕ್ತಿಯೊಬ್ಬರ ಮನೆಗೆ ರಾತ್ರೋರಾತ್ರಿ ೩೦ ಜನರ ತಂಡ ನುಗ್ಗಿ ಬೆದರಿಕೆ ಹಾಕಿರುವ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಎತ್ತಿನಬೈಲ್ನಲ್ಲಿ ನಡೆದಿದೆ.
ಹೌದು, ಕುಮಟಾ ತಾಲೂಕಿನ ಅಕ್ರಮ ಮರಳುಗಾರಿಕೆ ನಡೆಸುವವರ ಗೂಂಡಾಗಿರಿ ಮಿತಿ ಮೀರಿದೆ. ಇವರು ನಡೆಸುವ ವ್ಯಾಪಕ ಅಕ್ರಮ ಮರಳುಗಾರಿಕೆಯಿಂದ ಮತ್ಸö್ಯ ಸಂತತಿ ಅವನತಿ ಹಾದಿಯಲ್ಲಿದ್ದು, ಮತ್ಸö್ಯ ಕ್ಷಾಮದಿಂದ ಬಳಲುತ್ತಿರುವ ಅಲ್ಲಿನ ಮೀನುಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂಬಂಧ ಆ ಭಾಗದ ಸ್ಥಳೀಯರು ಅಕ್ರಮ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಆದರೂ ಅಲ್ಲಿನ ಅಕ್ರಮ ಮರಳು ದಂಧೆಕೋರರು ಯಾವ ವಿರೋಧಕ್ಕೂ ತಲೆಕೆಡಿಸಿಕೊಳ್ಳದೇ ಮರುಳುಗಾರಿಕೆಯನ್ನು ಅವ್ಯಾಹತವಾಗಿ ನಡೆಸುತ್ತಿರುವುದರಿಂದ ಮಿರ್ಜಾನ್ ಎತ್ತಿನಬೈಲ್ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತರಾದ ಮೋಹನ ಪಟಗಾರ ವರು ಈ ಸಂಬಂಧ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಹಾಗಾಗಿ ದೀವಗಿ ಭಾಗದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳ ಪರಿಶೀಲನೆಗೆ ಆಗಮಿಸಿದ ಭೂ ವಿಜ್ಞಾನಿ ಮಂಜುನಾಥ ಶನಿಯಾರ್ ದೇವಾಡಿಗ, ಗಣಿ ಇಲಾಖೆಯ ಕಿರಿಯ ಇಂಜಿನೀಯರ್ ಮಂಜುನಾಥ ತಿಮ್ಮಯ್ಯ ದೇವಾಡಿಗ ಮತ್ತು ದೀವಗಿ ಗ್ರಾಮ ಲೆಕ್ಕಾಧಿಕಾರಿ ಚರಣ ಮರಾಠಿ ಅವರು, ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳದಲ್ಲಿ ಟ್ರೆಂಚ್ ಕಾಮಗಾರಿ ನಡೆಸಲು ಮುಂದಾಗಿದ್ದರು.
ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮೂರೂರಿನ ಶ್ರೀಧರ ಗಣಪತಿ ಹೆಗಡೆ ಮತ್ತು ದೀವಗಿ ಗ್ರಾಪಂ ಸದಸ್ಯ ವಿನಾಯಕ ದೇಶಭಂಡಾರಿ ಎಂಬುವವರ ನೇತೃತ್ವದ ತಂಡ ಅಧಿಕಾರಿಗಳನ್ನು ದಿಗ್ಬಂಧನಕ್ಕೊಳಪಡಿಸಿ, ಟ್ರೆಂಚ್ ಕಾಮಗಾರಿ ಮುಂದುವರಿಸಿದರೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿರುವುದಲ್ಲದೇ ಅಧಿಕಾರಿಗಳ ಕೈ ಹಿಡಿದು ಎಳೆದಾಡಿದಲ್ಲದೇ ಅವರ ಮೊಬೈಲ್ ಕಿತ್ತುಕೊಂಡು ನಿಂದಿಸಿ, ಭಯ ಹುಟ್ಟಿಸಿದ್ದಾರೆ. ಈ ಗೂಂಡಾಗಿರಿಯ ಬಗ್ಗೆ ಭೂ ವಿಜ್ಞಾನಿ ಮಂಜುನಾಥ ಶನಿಯಾರ್ ದೇವಾಡಿಗ ಅವರು ತಮ್ಮ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಬೆದರಿಕೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಅಧಿಕಾರಿಗಳನ್ನು ಬೆದರಿಸಿದ ಈ ಅಕ್ರಮ ಮರಳು ದಂಧೆಕೋರರು ಅಧಿಕಾರಿಗಳಿಗೆ ದೂರು ನೀಡಿದ ಮಿರ್ಜಾನ್ ಎತ್ತಿನ ಬೈಲ್ ನಿವಾಸಿ ಮೋಹನ ಪಟಗಾರ ಅವರ ಮನೆಗೂ ರಾತ್ರಿ ಹೊತ್ತಿನಲ್ಲಿ ತೆರಳಿದ ೩೦ ಜನರ ತಂಡ ಅವರನ್ನು ಹಾಗೂ ಅವರ ಕುಟುಂಬದವರನ್ನು ಬೆದರಿಸಿದೆ. ಮೋಹನ ಪಟಗಾರ ಮನೆಯಲ್ಲಿ ಅವರ ಪತ್ನಿ ಹಾರ್ಟ್ ಪೇಸೆಂಟ್ ಆಗಿದ್ದು, ಪುತ್ರಿ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಾಳೆ. ಈ ಮೂವರು ಇರುವ ಮನೆಗೆ ರಾತ್ರಿ ಹೊತ್ತಿನಲ್ಲಿ ನುಗ್ಗಲು ಪ್ರಯತ್ನಿಸಿರುವುದಲ್ಲೆ ಮೋಹನ ಪಟಗಾರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.
ಅಷ್ಟರಲ್ಲಿ ಮೋಹನ ಪಟಗಾರ ಅಲ್ಲಿಂದ ತಪ್ಪಿಸಿಕೊಂಡು ಮನೆಯೊಳ್ಳಕ್ಕೆ ತೆರಳಿ ಬಾಗಿಲು ಹಾಕಿಕೊಂಡರೂ ಹೊರ ಭಾಗದಲ್ಲಿ ಗೌಜಿ-ಗದ್ದಲ ಎಬ್ಬಿಸಿ, ಇನ್ನೊಮ್ಮೆ ಮರಳುಗಾರಿಕೆ ವಿರುದ್ಧ ದೂರು ನೀಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೋಹನ ಪಟಗಾರ ಕುಮಟಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಮೂರೂರಿನ ಶ್ರೀಧರ ಗಣಪತಿ ಹೆಗಡೆ ಮತ್ತು ದೀವಗಿ ಗ್ರಾಪಂ ಸದಸ್ಯ ವಿನಾಯಕ ದೇಶಭಂಡಾರಿ ಸೇರಿದಂತೆ ದೇವಗಿ ಗ್ರಾಪಂ ಉಪಾಧ್ಯಕ್ಷ ಸಂಗೀತ ದೇಶಭಂಡಾರಿ, ದೀವಗಿಯ ರಮೇಶ ಅಂಬಿಗ, ನಿತ್ಯಾ ಅಂಬಿಗ, ಪಾಂಡು ಅಂಬಿಗ, ಸಚಿನ್ ದೇಶಭಂಡಾರಿ, ಸಂದೀಪ ದೇಶಭಂಡಾರಿ, ಭಾಸ್ಕರ್ ಅಂಬಿಗ, ಮಿರ್ಜಾನಿನ ಜಗದೀಶ ಗಿರಿಯನ್, ತಂಡ್ರಕುಳಿಯ ರಾಜು ಅಂಬಿಗ, ಗಣಪತಿ ಅಂಬಿಗ, ಮಂಜು ಅಂಬಿಗ, ದುಂಡಕುಳಿಯ ಗೋಪಾಲ ಗೌಡ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳು ಕುಮಟಾದ ಪ್ರಭಾವಿ ಜನಪ್ರತಿನಿಧಿಯೊಬ್ಬರ ಪರಮಾಪ್ತರಾಗಿದ್ದು, ಈ ದುಷ್ಕೃತ್ಯದ ವಿರುದ್ಧ ಪ್ರಕರಣ ದಾಖಲಿಸದಂತೆ ಆ ಪ್ರಭಾವಿ ಜನಪ್ರತಿನಿಧಿ ಪೊಲೀಸ್ ಅಧಿಕಾರಿಗಳ ಮೇಲೂ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ ಈ ಗ್ಯಾಂಗ್ ಅಧಿಕಾರಿಗಳಿಗೂ ಬೆದರಿಸಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರ ಸೂಚನೆ ಮೇರೆಗೆ ಕುಮಟಾ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಗಾಗಿ ಅಧಿಕಾರಿಗಳನ್ನು ಬೆದರಿಸಿದ ಪ್ರಮುಖ ಆರೋಪಿಗಳಿಗೆ ಈಗ ಬಂಧನದ ಭೀತಿ ಕೂಡ ಎದುರಾಗಿದ್ದು, ಅವರೆಲ್ಲ ಈಗ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿರುವ ಮಾಹಿತಿ ಇದೆ. ಒಟ್ಟಾರೆ ಗೂಂಡಾಗಿರಿ ಮಾಡುವುದಿಲ್ಲ ಎಂದು ಹೋದಲೆಲ್ಲ ಭಾಷಣ ಬಿಗಿಯುತ್ತಿರುವ ಪ್ರಭಾವಿ ಜನಪ್ರತಿನಿಧಿಯ ಬೆಂಬಲಿಗರೇ ಈಗ ಗೂಂಡಾಗಿರಿ ಮಾಡುತ್ತಿರುವುದು ಕುಮಟಾ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುವಂತಾಗಿದೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿದಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ