ಮಟ್ಕಾ ಕಥಾನಾಕ ಭಾಗ-01
ಅಂಕೋಲಾ : ಸಾಮಾನ್ಯವಾಗಿ ಗ್ರಾಮದೇವಿಯ ಹೆಬ್ಬಾಗಿನಲ್ಲಿ `ಬಾಗಿಲಬಂಟ’ ಎಂಬ ದೈವ ಪುರುಷರಿರುತ್ತಾರೆ ಎನ್ನುವುದು ಅನೇಕರ ನಂಬಿಕೆ. ಗ್ರಾಮದೇವಿ ಬಳಿ ಬರುವವರನ್ನು ವಿಚಾರಿಸಿ ಬಿಡುವುದು ಈ ಬಾಗಿಲಬಂಟನ ಕೆಲಸ ಮತ್ತು ಬಾಗಿಲನ್ನು ಕಾಯುವವನೇ ಬಾಗಿಲಬಂಟ ಎಂದು ನಂಬುವವರೂ ಇದ್ದಾರೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಟ್ಕಾ ಆಟ ಜೋರಾಗೇ ನಡೆಯುತ್ತಿದ್ದು, ಈ ಆಟದ ರಕ್ಷಣೆಗೆ ಇಲ್ಲೊಬ್ಬ ಬಾಗಿಲಬಂಟ ಸಿದ್ಧವಾಗಿದ್ದಾನೆ.
ಅಂಕೋಲಾದಲ್ಲಿನ ಮಟ್ಕಾಕ್ಕೆ ತಾನೇ ದೊರೆ ಎಂದು ಬೀಗುವ ಈತ ಕೆಲವು ದಿನದಿಂದ ಮಟ್ಕಾ ಬಂದ್ ಇಟ್ಟಿದ್ದ. ಇದೀಗ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಚುನಾವಣೆಗೆ ನಿಂತ ಅಭ್ಯರ್ಥಿಗಳಂತೆ ಈತ ತಾನೇ ಖುದ್ದು ಹಳ್ಳಿಹಳ್ಳಿಗೆ ತೆರಳಿ ಗೂಡಂಗಡಿಕಾರರಲ್ಲಿ, ತಾನು ಮಟ್ಕಾ ಆರಂಭಿಸುತ್ತಿದ್ದೇನೆ. ನಿಮ್ಮ ಎಲ್ಲ ಲಿಸ್ಟನ್ನೂ ತನಗೇ ಕೊಡಬೇಕು''ಎಂದು ತಾಕೀತು ಮಾಡಿದ್ದಾನೆ.
ಖಾಕಿ ದಾಳಿಯಾದರೆ ನಾವೇನೂ ಮಾಡುವುದು?” ಎಂದು ಗೂಡಗಂಡಿಕಾರರು ಪ್ರಶ್ನಿಸಿದಾಗ ಈ ಮಟ್ಕಾ ದೊರೆ ಥೇಟ್ ಬಾಗಿಲಬಂಟನ ಶೈಲಿಯಲ್ಲೇ “ನಿಮ್ಮ ರಕ್ಷಣೆಗೆ ನಾನಿದ್ದೇನೆ” ಎಂದು ಕಾಂತಾರ ರೀತಿಯಲ್ಲಿ ಅಭಯ ನೀಡಿ ಬಂದಿದ್ದಾನಂತೆ.
ನಿತ್ಯ ಮಟ್ಕಾದ `ಸಂಜೆ ದೀಪ’ ತನ್ನಿಂದಲೇ ಉರಿಯಬೇಕು ಎಂದು ಬಯಸುವ ಈ ಬಾಗಿಲಬಂಟ, ಇಡೀ ಅಂಕೋಲಾದ ಮಟ್ಕಾವನ್ನು ತಾನೇ ಆಳಬೇಕು ಎಂದು ಬಯಸುತ್ತಾನೆ. ಈತ ತನಗೆ ಲಿಸ್ಟ್ ಕೊಡದ ಗೂಡಂಗಡಿಕಾರರ ಮೇಲೆ ಸದಾ ಕೆಂಗಣ್ಣು ಬೀರುತ್ತ ಅಂತವರ ಮೇಲೆ ಖಾಕಿ ದಾಳಿ ಮಾಡಿಸುವ ಕೆಲಸವನ್ನೂ ಮಾಡುತ್ತಾನಂತೆ.
ಇಂತಹ ಮಟ್ಕಾ ಆಡಿಸುವ ದೋ ನಂಬರ್ ದಂಧೆಯವರ ವಿರುದ್ಧ ಕಾನೂನು ಕ್ರಮವಾಗಬೇಕು ಎನ್ನುವುದು ಅಂಕೋಲಾದ ಸಜ್ಜನ ನಾಗರಿಕರ ಆಗ್ರಹವಾಗಿದೆ. ಸಂಬಂಧಪಟ್ಟವರು ಜಾಗೃತರಾಗುತ್ತಾರಾ ಕಾದು ನೋಡಬೇಕಿದೆ.