
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಪ್ರಯೋಜನವನ್ನು ಮಹಿಳಾ ಪ್ರಯಾಣಿಕರಿಗೆ ನಿರಾಕರಿಸಲಾಗುತ್ತಿದೆಯೇ? ಹೊರರಾಜ್ಯದ ಬಸ್ ಎಂಬ ನಾಮಫಲಕದ ನೆಪದಲ್ಲಿ ಮಹಿಳೆಯರಿಂದ ಪ್ರಯಾಣದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿತ್ಯವೂ ಕಾರವಾರದಿಂದ ದಾವಣಗೆರೆವರೆಗೆ ಸಂಚರಿಸುವ ಬಸ್ ಗೆ ಮಡಗಾಂವ್–ದಾವಣಗೆರೆ ಎಂದು ಬಸ್ನ ಮುಂಭಾಗದಲ್ಲಿ ನಾಮಫಲಕ ಅಳವಡಿಸಲಾಗಿದೆ. ಆದರೆ ಈ ಬಸ್ ವಾಸ್ತವವಾಗಿ ಕಾರವಾರದಿಂದ ದಾವಣಗೆರೆವರೆಗೆ ಮಾತ್ರ ಸಂಚರಿಸುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಹೊರರಾಜ್ಯದ ಬಸ್ಗಳಿಗೆ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ ಎಂಬ ಕಾರಣ ಮುಂದಿಟ್ಟು,ಈ ಬಸ್ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನಿರಾಕರಿಸಲಾಗುತ್ತಿದೆ ಎನ್ನಲಾಗಿದೆ.
ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಕೇಳಿದಾಗ, ಇದು ಹೊರರಾಜ್ಯದ ಬಸ್ ಆಗಿದ್ದು, ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಹೇಳಿ ಮಹಿಳೆಯರನ್ನ ಹತ್ತಿಸಿಕೊಳ್ಳದೆ ಹೋಗುವುದು ಇಲ್ಲ ಅನಿವಾರ್ಯವಾಗಿ ಮಹಿಳೆಯರೇನಾದರೂ ಈ ಬಸ್ ನಲ್ಲಿ ಪ್ರಯಾಣಿಸಿದ್ರೆ ಅವರಿಂದ ಟಿಕೆಟ್ ಹಣ ಪಾವತಿಸಲಾಗುತ್ತಿದೆ ಎನ್ನುವ ಆರೋಪ ಇದೆ. ಇದು ಅನೇಕ ತಿಂಗಳುಗಳಿಂದ ಇದೆ ರೀತಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೊಂದೆ ಬಸ್ ಗಳಿಗೆ ಅಲ್ಲದೆ ಇನ್ನೂ ಅನೇಕ ಬಸ್ ಗಳಿಗೆ ಇದೇ ರೀಯಾಗಿ ನಾಮಫಲಕ ಅಳವಡಿಸಿ ಪ್ರಯಾಣಿಕರಿಗೆ ಯಾಮಾರಿಸುವ ಕೆಲಸ ಆಗುತ್ತಿದೆ..

ನಾಮಫಲಕ ಒಂದು, ಸಂಚಾರ ಮಾರ್ಗ ಮತ್ತೊಂದು
ಬಸ್ನ ನಾಮಫಲಕದಲ್ಲಿ ಮಡಗಾಂವ್–ದಾವಣಗೆರೆ ಎಂದು ನಮೂದಿಸಿದ್ದರೂ, ಅದರ ಸಂಚಾರ ಕಾರವಾರದಿಂದ ದಾವಣಗೆರೆವರೆಗೆ ಮಾತ್ರವಿದೆ ಎಂಬುದು ಪ್ರಯಾಣಿಕರ ಆರೋಪ. ಬಸ್ನ ನೈಜ ಸಂಚಾರ ಮಾರ್ಗ ಮತ್ತು ನಾಮಫಲಕದ ನಡುವಿನ ವ್ಯತ್ಯಾಸವೇ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಘಟನೆಗಳು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಗಡಿ ಜಿಲ್ಲೆಗಳಲ್ಲಿಯೂ ಇದೇ ಮಾದರಿಯಲ್ಲಿ ಹೊರರಾಜ್ಯದ ನಾಮಫಲಕ ಹೊಂದಿರುವ ಬಸ್ಗಳು ಸಂಚರಿಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಇಂತಹ ಬಸ್ಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ ಸೌಲಭ್ಯ ಸಿಗದೆ ಹಣ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಸಾರಿಗೆ ಇಲಾಖೆ ಮೌನ ಮುರಿಯುವುದೇ?
ಮಡಗಾಂವ್–ದಾವಣಗೆರೆ ಎಂದು ನಾಮಫಲಕ ಹಾಕಿರುವ ಬಸ್ನ ಅಧಿಕೃತ ಮಾರ್ಗ ಯಾವುದು? ಕಾರವಾರದಿಂದ ದಾವಣಗೆರೆಗೆ ಮಾತ್ರ ಸಂಚರಿಸುತ್ತಿದ್ದರೆ ಅದಕ್ಕೆ ಹೊರರಾಜ್ಯದ ಬಸ್ ಎಂಬ ಮಾನ್ಯತೆ ಹೇಗೆ? ಇಂತಹ ಬಸ್ಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ ಸೌಲಭ್ಯ ನಿರಾಕರಿಸುತ್ತಿರುವುದಕ್ಕೆ ನಿಯಮಗಳ ಆಧಾರವೇನು?
ಈ ಪ್ರಶ್ನೆಗಳಿಗೆ ನೈಋತ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಾರಿಗೆ ಇಲಾಖೆ ಉತ್ತರ ನೀಡಬೇಕಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸಂಚರಿಸುವ ಇಂತಹ ಬಸ್ಗಳ ಕುರಿತು ಸಮಗ್ರ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಸೌಲಭ್ಯ ಅನ್ಯಾಯವಾಗಿ ನಿರಾಕರಣೆಯಾಗದಂತೆ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ/ಕಳ್ಳ ಸಂಬಂಧಕ್ಕೆ ಅಡ್ಡಿಯಾದ ಗಂಡ : ಪ್ರಿಯಕರನ ಜೊತೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ ಹೆಂಡತಿ..!

