ಸುದ್ದಿಬಿಂದು ಬ್ಯೂರೋ ವರದಿ

 ಬೆಂಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಮಹಿಳೆಯರು ಇನ್ನೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಮೂರು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು ಹಣ ಜಮಾ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಇದೀಗ ನಿರಾಸೆ ಉಂಟಾಗುವಂತಾಗಿದೆ. ದೀಪಾವಳಿ ಹಬ್ಬ ಆರಂಭವಾಗಿದ್ದರೂ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮೆ ಮಾಡಲಾಗುತ್ತದೆ. ಈ ಯೋಜನೆಯಿಂದ ಅದೆಷ್ಟೋ ಮಹಿಳೆಯರು ಮನೆಯ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ, ದಿನಸಿ ಸಾಮಗ್ರಿಗಳ ಖರೀದಿ ಸೇರಿದಂತೆ ಕುಟುಂಬದ ಹಲವು ಅಗತ್ಯಗಳಿಗೆ ಬಳಸಿಕೊಳ್ಳುತ್ತಿರುವ ಮಹಿಳೆಯರಿಗೆ ಯೋಜನೆಯ ಹಣ ಮಹತ್ವದ ಆರ್ಥಿಕ ನೆರವಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಹಣ ಜಮೆಯಾಗುವುದರಲ್ಲಿ ವಿಳಂಬವಾಗುತ್ತಿರುವುದರಿಂದ ಫಲಾನುಭವಿಗಳು ಸಂಕಷ್ಟ ಎದುರಿಸುವಂತಾಗಿತ್ತು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ  ಮೂರು ತಿಂಗಳ ಹಣವನ್ನು ಒಟ್ಟಿಗೆ ಜಮೆ ಮಾಡಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದ್ದರು. ಹೀಗಾಗಿ ಹಬ್ಬದ ಖರ್ಚುಗಳಿಗೆ ನೆರವಾಗಲಿದೆ ಎಂಬ ಆಶಾಭಾವನೆಯೊಂದಿಗೆ ಮಹಿಳೆಯರು ಕಾಯುತ್ತಿದ್ದರು. ಆದರೆ ಹಬ್ಬ ಆರಂಭವಾದರೂ ನಿರೀಕ್ಷಿತ ಹಣ ಖಾತೆಗೆ ಬಂದಿಲ್ಲ. ಮೂರು ತಿಂಗಳ ಹಣ ಜಮೆಯಾಗುವುದು ಇರಲಿ, ಅದೆಷ್ಟೋ ಮಹಿಳೆಯರಿಗೆ ಇನ್ನೂ ಕನಿಷ್ಠ ಒಂದು ತಿಂಗಳ ಹಣವೂ ಖಾತೆಗೆ ಬಂದಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಘೋಷಣೆಯ ಬಳಿಕ ಹಣ ಯಾವಾಗ ಖಾತೆಗೆ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಮಹಿಳೆಯರು ಪ್ರತಿದಿನ ಬ್ಯಾಂಕ್ ಖಾತೆ ಪರಿಶೀಲಿಸುತ್ತಿದ್ದಾರೆ. ಕೆಲವರು ಬ್ಯಾಂಕ್‌ಗೆ ತೆರಳಿ ಪಾಸ್‌ಬುಕ್ ಅಪ್‌ಡೇಟ್ ಮಾಡಿಸುತ್ತಿದ್ದರೆ, ಇನ್ನು ಕೆಲವರು ಮೊಬೈಲ್‌ನಲ್ಲಿ ಹಣ ಜಮೆಯಾದ ಸಂದೇಶ ಬರುವುದೇ ಎಂದು ಕಾಯುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವು ಬಾರಿ ಖಾತೆ ಪರಿಶೀಲಿಸಿದರೂ ಹಣ ಜಮೆಯಾಗದಿರುವುದು ಮಹಿಳೆಯರಲ್ಲಿ ಬೇಸರ ಮೂಡಿಸಿದೆ.

ಘೋಷಣೆ ಮಾತ್ರ, ಹಣ ಮಾತ್ರ ಇಲ್ಲ ಎಂಬ ಆರೋಪ

ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಕುರಿತು ಸರ್ಕಾರದ ವತಿಯಿಂದ ಆಗಾಗ್ಗೆ ಭರವಸೆಗಳು ಕೇಳಿಬರುತ್ತಿದ್ದರೂ, ಫಲಾನುಭವಿಗಳ ಖಾತೆಗೆ ಹಣ ತಲುಪುವವರೆಗೆ ಆ ಭರವಸೆಗಳಿಂದ ಪ್ರಯೋಜನವೇನು ಎಂದು ಮಹಿಳೆಯರು ಪ್ರಶ್ನಿಸುವಂತಾಗಿದೆ. ಮೂರು ತಿಂಗಳ  ಹಣ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಇದೀಗ ಒಂದು ತಿಂಗಳ ಹಣವೂ ಸಿಗದಿರುವುದು ಮತ್ತಷ್ಟು  ಬೇಸರಕ್ಕೆ ಕಾರಣವಾಗಿದೆ. ಸರ್ಕಾರದ ಘೋಷಣೆಗಳು ಕೇವಲ ಪ್ರಕಟಣೆಗಳಿಗೆ ಸೀಮಿತವಾಗದೆ, ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಬೇಕು ಎಂಬುದು ಮಹಿಳೆಯರ ಒತ್ತಾಯವಾಗಿದೆ.

ಒಟ್ಟಿನಲ್ಲಿ, ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮೀ ಹಣ ಖಾತೆಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಹಿಳೆಯರು ಹಬ್ಬದ ಸಂಭ್ರಮದ ನಡುವೆಯೂ ಬ್ಯಾಂಕ್ ಖಾತೆ ಪರಿಶೀಲಿಸುತ್ತಾ ಕುಳಿತಿದ್ದಾರೆ.