ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ನಕಲಿ PhonePe ಪಾವತಿ ಸಂದೇಶ ತೋರಿಸಿ ಮೊಬೈಲ್ ಅಂಗಡಿಯೊಂದರಿಂದ ಮೊಬೈಲ್ ಖರೀದಿಸಿ ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸುಮಾರು 1 ಲಕ್ಷ ಮೌಲ್ಯದ ಫೋರ್ಡ್ ಐಕಾನ್ ಕಾರನ್ನೂ ವಶಕ್ಕೆ ಪಡೆದಿದ್ದಾರೆ.
2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ ಸುಮಾರು 2.50ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕುಮಟಾ ಹೊಸ ಬಸ್ ನಿಲ್ದಾಣದ ಸಮೀಪದ ಮಾತೋಶ್ರೀ ಏಜೆನ್ಸೀಸ್ ಮೊಬೈಲ್ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ. ರಿಯಲ್ಮಿ ಕಂಪನಿಯ C-100X, ಡೀಪ್ ಬ್ಲೂ ಬಣ್ಣದ 4GB RAM ಹಾಗೂ 64GB ಮೆಮೊರಿ ಸಾಮರ್ಥ್ಯದ ಮೊಬೈಲ್ ಖರೀದಿಸಿದ್ದಾನೆ. ಮೊಬೈಲ್ನ 16,700 ಮೊತ್ತವನ್ನು PhonePe ಮೂಲಕ ಪಾವತಿಸಿರುವುದಾಗಿ ನಕಲಿ ಪಾವತಿ ಸಂದೇಶ ತೋರಿಸಿ, ಹಣ ಪಾವತಿಸದೆ ಮೊಬೈಲ್ನೊಂದಿಗೆ ಪರಾರಿಯಾಗಿದ್ದ.
ಈ ಬಗ್ಗೆ ಅಂಗಡಿ ಮಾಲೀಕ ಧನಂಜಯ ಮಂಜುನಾಥ ನಾಯ್ಕ, ಕೂಜಳ್ಳಿ ಅವರು ಅಕ್ಟೋಬರ್ 24ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 188/2026, ಕಲಂ 319(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಅಂಗಡಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಸುಳಿವುಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಿಂಗಮ್ಮನಹಳ್ಳಿ ಗ್ರಾಮದ ಕಿರಣಕುಮಾರ ಪಿ. ಎಂದು ಗುರುತಿಸಲಾಗಿದೆ. ಈತ ಚಾಲಕ ಹಾಗೂ ಪೇಂಟರ್ ವೃತ್ತಿ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿತ ಕೃತ್ಯಕ್ಕೆ ಬಳಸಿದ್ದ ಕೆಎ-04/ಎಂಡಿ-3771 ನೋಂದಣಿ ಸಂಖ್ಯೆಯ ಫೋರ್ಡ್ ಐಕಾನ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ. ಪಿಎಸ್ಐ ವಿಠ್ಠಲ ಮಲವಡಕರ, ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಸುಬ್ರಹ್ಮಣ್ಯ ಹೆಗಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ/ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ವೇಳೆ ಬರ್ಗಿಯ ಪಾಂಡುರಂಗ ಪಟಗಾರ ಸಾವು (ನಾಟಕ ಪಾಂಡು)

