ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಪ್ಪೆ ಚಿಪ್ಪು ತೆಗೆಯಲು ಅಘನಾಶಿನಿ ನದಿಯ ಹಿನ್ನೀರಿನಲ್ಲಿ ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿ ಸಮೀಪ ನಡೆದಿದೆ

ಬರ್ಗಿಯ ನಿವಾಸಿ ಪಾಂಡುರಂಗ ಎಂ. ಪಟಗಾರ (55) ಎಂದು ಗುರುತಿಸಲಾಗಿದೆ. ಪಾಂಡುರಂಗ ಪಟಗಾರ ಹಾಗೂ ವಸಂತ ನಾಯ್ಕ ಎಂಬುವವರು ಸೇರಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದರು.
ಈ ವೇಳೆ ಪಾಂಡುರಂಗ ಪಟಗಾರ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇವರು ನಿತ್ಯವೂ ಕಪ್ಪೆ ಚಿಪ್ಪು ತೆಗೆಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅವರೊಂದಿಗೆ ತೆರಳಿದ್ದ ವಸಂತ ನಾಯ್ಕ ಎಂಬುವವರು ಕೂಡ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತ ಪಾಂಡುರಂಗ ಪಟಗಾರ ಅವರು ನಾಟಕ ಕಲಾವಿದರಾಗಿದ್ದು, ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಕಲಾವಲಯದಲ್ಲಿ ದುಃಖದ ಛಾಯೆ ಆವರಿಸಿದೆ.

ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಯಗಳು ಸ್ಥಳಕ್ಕೆ ಆಗಮಿಸಿದ್ದಾರೆ.