ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಜಿಲ್ಲೆಯಾದ್ಯಂತ ತೀವ್ರ ವಿರೋಧ ಮತ್ತು ಚರ್ಚೆಗೆ ಕಾರಣವಾಗಿರುವ ಬೇಡ್ತಿ–ಅಘನಾಶಿನಿ–ವರದಾ ನದಿ ಜೋಡಣೆ ಯೋಜನೆಯ ಭವಿಷ್ಯ ಇದೀಗ ರಾಜ್ಯ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ. ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವ ಅಧಿಕಾರ ಕರ್ನಾಟಕ ಸರ್ಕಾರಕ್ಕೆ ಮಾತ್ರ ಇದೆ ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಅಧಿಕೃತ ಪತ್ರದ ಮೂಲಕ ಸ್ಪಷ್ಟಪಡಿಸಿದೆ.
ಶಿರಸಿಯ ಡಾ. ರವಿಕಿರಣ್ ಪಟವರ್ಧನ್ ಅವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿರುವ NWDA, ನವೆಂಬರ್ 3, 2026ರಂದು ಈ ಕುರಿತು ಪತ್ರ ನೀಡಿದೆ. ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಹಾಗೂ ಯೋಜನೆಯ ಹಣಕಾಸಿನ ಹೊಣೆಗಾರಿಕೆ ಯಾರ ಮೇಲಿರಲಿದೆ ಎಂಬುದರ ಕುರಿತು ಅವರು ಸ್ಪಷ್ಟನೆ ಕೋರಿದ್ದರು.
ಯೋಜನೆಯ ಸ್ವರೂಪದಲ್ಲಿ ಬದಲಾವಣೆ
ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ ಮೂಲ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು NWDA ತಿಳಿಸಿದೆ. ಹಿಂದಿನ ಯೋಜನೆಯಲ್ಲಿ ತುಂಗಭದ್ರಾ ಜಲಾಶಯವನ್ನು ಪರಿಗಣಿಸಲಾಗಿತ್ತು. ಆದರೆ ಪರಿಷ್ಕೃತ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರೇವದ್ದತ್ತಿ ಗ್ರಾಮದಲ್ಲಿ ಶೇಖರಣಾ ಜಲಾಶಯ ನಿರ್ಮಿಸುವ ಪ್ರಸ್ತಾವನೆ ಸೇರಿಸಲಾಗಿದೆ. ನೀರು ಸಾಗಣೆಗಾಗಿ ಎರಡು ಪರ್ಯಾಯ ವ್ಯವಸ್ಥೆಗಳನ್ನೂ ರೂಪಿಸಲಾಗಿದೆ.
ಈ ಪರಿಷ್ಕೃತ ಯೋಜನೆಯ ಪೂರ್ವ ಸಾಧ್ಯತಾ ವರದಿಯನ್ನು 2025ರ ಆಗಸ್ಟ್ 12ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.ರಾಜ್ಯ ಸರ್ಕಾರದ ಒಪ್ಪಿಗೆ ಬಳಿಕ ಡಿಪಿಆರ್ ಕಾರ್ಯ ಆರಂಭ ಪರಿಷ್ಕೃತ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿತ್ತು. ಇದರ ಮುಂದುವರಿದ ಭಾಗವಾಗಿ 2025ರ ಡಿಸೆಂಬರ್ 23ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸದ್ಯ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು NWDA ಪತ್ರದಲ್ಲಿ ಉಲ್ಲೇಖಿಸಿದೆ.
ಡಿಪಿಆರ್ ಸ್ಥಗಿತದ ಚೆಂಡು ರಾಜ್ಯ ಸರ್ಕಾರದ ಅಂಗಳಕ್ಕೆ
ಈ ಪತ್ರದಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು ಡಿಪಿಆರ್ ಸ್ಥಗಿತಗೊಳಿಸುವ ಅಧಿಕಾರದ ಕುರಿತ ಸ್ಪಷ್ಟನೆ. ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ನಿಲ್ಲಿಸುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರವೇ ಕೈಗೊಳ್ಳಬೇಕಾಗಿದೆ ಎಂದು NWDA ತಿಳಿಸಿದೆ.
ಇದರಿಂದ ಯೋಜನೆಯನ್ನು ಮುಂದುವರಿಸಬೇಕೇ, ಸ್ಥಗಿತಗೊಳಿಸಬೇಕೇ ಅಥವಾ ಮರುಪರಿಶೀಲನೆಗೆ ಒಳಪಡಿಸಬೇಕೇ ಎಂಬುದರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂಬುದು ಸ್ಪಷ್ಟವಾಗಿದೆ.
ಹಣಕಾಸಿನ ಹೊಣೆಗಾರಿಕೆ ಇನ್ನೂ ನಿರ್ಧಾರವಾಗಿಲ್ಲ
ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆ ಹಾಗೂ ಅನುದಾನ ಹಂಚಿಕೆಯ ಮಾದರಿಯನ್ನು ಮುಂದಿನ ಹಂತದಲ್ಲಿ ನಿರ್ಧರಿಸಲಾಗುವುದು ಎಂದು NWDA ತಿಳಿಸಿದೆ. ಹೀಗಾಗಿ ಯೋಜನೆಯ ಒಟ್ಟು ವೆಚ್ಚ ಎಷ್ಟು? ಕೇಂದ್ರ ಸರ್ಕಾರದ ಪಾಲು ಎಷ್ಟು? ರಾಜ್ಯ ಸರ್ಕಾರ ಎಷ್ಟು ಹಣ ಭರಿಸಬೇಕು? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಸ್ಪಷ್ಟ ಉತ್ತರ ದೊರೆತಿಲ್ಲ.
ಪರಿಸರ, ಜನಜೀವನದ ಆತಂಕಕ್ಕೆ ಉತ್ತರ ಬೇಕಿದೆ
ಬೇಡ್ತಿ–ಅಘನಾಶಿನಿ–ವರದಾ ನದಿ ಜೋಡಣೆ ಯೋಜನೆಯು ಕೇವಲ ನೀರು ವರ್ಗಾವಣೆ ಯೋಜನೆಯಾಗಿ ಉಳಿದಿಲ್ಲ. ಪಶ್ಚಿಮ ಘಟ್ಟದ ಪರಿಸರ, ನದಿಗಳ ನೈಸರ್ಗಿಕ ಹರಿವು, ಅರಣ್ಯ ಸಂಪತ್ತು, ಜೀವವೈವಿಧ್ಯ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿಯೂ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಲಾಗಿತ್ತು.
ರಾಜ್ಯ ಸರ್ಕಾರದ ಮುಂದಿದೆ ಮಹತ್ವದ ನಿರ್ಧಾರ
NWDA ನೀಡಿರುವ ಸ್ಪಷ್ಟನೆಯಿಂದ ಡಿಪಿಆರ್ ಸ್ಥಗಿತಗೊಳಿಸುವ ನಿರ್ಧಾರ ರಾಜ್ಯ ಸರ್ಕಾರದ ಕೈಯಲ್ಲಿದೆ ಎಂಬುದು ಬಹಿರಂಗವಾಗಿದೆ. ಜಿಲ್ಲೆಯ ಜನರ ವಿರೋಧ, ಪರಿಸರದ ಸೂಕ್ಷ್ಮತೆ ಹಾಗೂ ನದಿ ತಟದ ಜನರ ಬದುಕಿನ ಆತಂಕವನ್ನು ಸರ್ಕಾರ ಪರಿಗಣಿಸಲಿದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.
ಬೇಡ್ತಿ–ಅಘನಾಶಿನಿ–ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ಗೆ ರಾಜ್ಯ ಸರ್ಕಾರ ತಡೆ ನೀಡಲಿದೆಯೇ? ಅಥವಾ ಯೋಜನೆಯ ಕಾರ್ಯ ಮುಂದುವರಿಸಲಿದೆಯೇ? ಎಂಬುದು ಉತ್ತರ ಕನ್ನಡ ಜಿಲ್ಲೆಯ ಜನರ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಎಲ್ಲರ ಚಿತ್ತ ರಾಜ್ಯ ಸರ್ಕಾರದ ಮುಂದಿನ ನಿರ್ಧಾರದತ್ತ ನೆಟ್ಟಿದೆ.

