ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಕಾಯಿಲೆಯ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಹೃದಯ ತಜ್ಞರಾದ ಡಾ.ಲಕ್ಷ್ಮೀಶ ನಾಯ್ಕ ಅವರು ಪಾರ್ಶ್ವವಾಯು ಉಂಟಾಗಲು ಕಾರಣಗಳು, ಕಾಯಿಲೆಯ ಲಕ್ಷಣಗಳು, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು.

ಪಾರ್ಶ್ವವಾಯು (ಸ್ಟ್ರೋಕ್) ಮೆದುಳಿಗೆ ರಕ್ತದ ಹರಿವು ತಡೆಯಾದಾಗ ಅಥವಾ ಮೆದುಳಿನ ರಕ್ತನಾಳ ಒಡೆದು ರಕ್ತಸ್ರಾವವಾದಾಗ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು ಹಾಗೂ ದೈಹಿಕ ಚಟುವಟಿಕೆಯ ಕೊರತೆ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.

ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಹಠಾತ್ ಬಲಹೀನತೆ ಅಥವಾ ಮರಗಟ್ಟುವಿಕೆ, ಮಾತು ತೊದಲುವುದು, ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆಯಾಗುವುದು, ದೃಷ್ಟಿ ಮಂಜಾಗುವುದು ಹಾಗೂ ಸಮತೋಲನ ತಪ್ಪುವುದು ಪಾರ್ಶ್ವವಾಯುವಿನ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವಿಳಂಬ ಮಾಡದೆ ಆಸ್ಪತ್ರೆಗೆ ಕರೆದೊಯ್ಯಬೇಕು. ಪಾರ್ಶ್ವವಾಯುವಿನ ಚಿಕಿತ್ಸೆಯಲ್ಲಿ ಸಮಯ ಅತ್ಯಂತ ಮಹತ್ವದ್ದಾಗಿದ್ದು, ತ್ವರಿತ ವೈದ್ಯಕೀಯ ಚಿಕಿತ್ಸೆ ಪಡೆದರೆ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ ಎಂದು ಅವರು ವಿವರಿಸಿದರು.

ಪಾರ್ಶ್ವವಾಯುವಿನ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಗೆ ಸ್ವಯಂ ಚಿಕಿತ್ಸೆ ನೀಡುವುದು, ವೈದ್ಯರ ಸಲಹೆಯಿಲ್ಲದೆ ಔಷಧಿ ನೀಡುವುದು ಅಥವಾ ಆಸ್ಪತ್ರೆಗೆ ಕರೆದೊಯ್ಯುವುದನ್ನು ವಿಳಂಬಿಸುವುದು ಅಪಾಯಕಾರಿ. ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಧೂಮಪಾನದಿಂದ ದೂರವಿರುವುದು ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡಾ. ಲಕ್ಷ್ಮೀ ನಾಯ್ಕ ತಿಳಿಸಿದರು.

ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಡೆದ ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಿತ್ತು.