ಸುದ್ದಿಬಿಂದು ಬ್ಯೂರೋ ವರದಿ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಹೊಸೂರು ಸೇತುವೆ ಬಳಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಇಬ್ಬರು ಸವಾರರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳಲ್ಲಿ ಸೋನುಕುಮಾರ ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಮೂಲದ ಅನಿಲ್ ಕುಮಾರ ಹಾಗೂ ಸೋನುಕುಮಾರ ಗಾಯಗೊಂಡವರು. ಇಬ್ಬರೂ ಮಾದನಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕ್ರೇನ್ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಅನಿಲ್ ಕುಮಾರ ಊರಿಗೆ ತೆರಳುವ ಹಿನ್ನೆಲೆಯಲ್ಲಿ ಆತನನ್ನು ಅಂಕೋಲಾ ರೈಲ್ವೆ ನಿಲ್ದಾಣಕ್ಕೆ ಬಿಡಲು ಸೋನುಕುಮಾರ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಹೊಸೂರು ಸೇತುವೆ ಬಳಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನೂ ತಕ್ಷಣ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋನುಕುಮಾರನಿಗೆ ಗಂಭೀರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ/ ಗೋಕರ್ಣ ಸಮುದ್ರದ ಸುಳಿಗೆ ಸಿಲುಕಿದ ಹಾವೇರಿ, ಚಿಕ್ಕಬಳ್ಳಾಪುರದ ಮೂವರು ಪ್ರವಾಸಿಗರ ರಕ್ಷಣೆ!