ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಕಾರವಾರ ತಾಲೂಕು–ಕಾರವಾರ ವಲಯದ ಆಶ್ರಯದಲ್ಲಿ ಬಾಡದ ಮಹಾದೇವ ದೇವಸ್ಥಾನದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಮೃತ್ಯುಂಜಯ ಹೋಮ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕರಾದ ಘನಶ್ಯಾಮ್ ಜೋಶಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಕಾರವಾರದ ಮಾಜಿ ಶಾಸಕರಾದ ರೂಪಾಲಿ ಎಸ್. ನಾಯ್ಕ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣದ ಮೂಲಕ ಗ್ರಾಮೀಣ ಸಮಾಜದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಶಿಸ್ತು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು. ಪರಮಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಜನೆಗಳಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾತಂತ್ರ್ಯಭಾವ ಬೆಳೆದಿದೆ ಎಂದು ಅವರು ಹೇಳಿದರು.

ನಿವೃತ್ತ ಕೆಎಂಎಎಸ್ ಅಧಿಕಾರಿ ಸತೀಶ್ ಜಿ. ಗೋಸಾವಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಸಂಘಟಿಸಿರುವುದು ಅತ್ಯಂತ ಅಮೂಲ್ಯ ಕಾರ್ಯವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ರಾಜೇಂದ್ರ ಅವರು ಪೂಜೆಯ ಪ್ರಯೋಜನ ಹಾಗೂ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಗಾಯತ್ರಿ ಭಟ್ ಅವರು, ಕುಟುಂಬ ಸಹಕಾರ, ಸಹನೆ ಹಾಗೂ ತಾಳ್ಮೆಯಿಂದ ಇಂತಹ ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವೆಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಕಾರವಾರ ಯೋಜನಾಧಿಕಾರಿಗಳಾದ ಶಿವರಾಜ್ ಆಚಾರ್ಯ ಅವರು, ಯೋಜನೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಸೌಲಭ್ಯಗಳು, ಬ್ಯಾಂಕ್ ಮೂಲಕ ಬಿಸಿ ಏಜೆಂಟ್ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಷಣಿ ರಾಜೇಶ್ ಅವರು, “ಯೋಜನೆಯಿಂದ ಮಹಿಳೆಯರು ನಾಲ್ಕು ಗೋಡೆಯೊಳಗಿನ ಬದುಕಿನಿಂದ ಹೊರಬಂದು ಧೈರ್ಯವಾಗಿ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವ ಶಕ್ತಿಯನ್ನು ಪಡೆದಿದ್ದಾರೆ. ಇಂತಹ ಯೋಜನೆಯ ಒಕ್ಕೂಟದ ಅಧ್ಯಕ್ಷೆಯಾಗಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಜುಬಾಗ್, ಮೂಡಲ್ಮಕ್ಕಿ, ನದಿವಾಡ, ಕೊಡಿಬೀರ, ಕೊಡಿಬಾಗ್, ಶೇಜವಾಡ ಒಕ್ಕೂಟಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಜವಾಡದ ಗುರುಪ್ರಸಾದ್ ಸ್ವಸಹಾಯ ಸಂಘದ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ರೋಷಣಿ ರಾಜೇಶ್ ಪಾವಸ್ಕರ್ ಸ್ವಾಗತಿಸಿದರು . ವಲಯದ ಸಾಧನ ವರದಿಯನ್ನು ನಾಗರತ್ನ ಸೇವಾ ಪ್ರತಿನಿಧಿ ವರದಿ ಮಂಡಿಸಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ  ಗಾಯತ್ರಿ ನಿರೂಪಿಸಿದರು. ವಲಯ ಮೇಲ್ವಿಚಾರಕಿ  ವಿಜಯ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ವಲಯದ ಎಲ್ಲಾ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ; ಕುಡಿಯಲು ನೀರೂ ಇಲ್ಲ, ನಿರ್ವಹಣೆಯೂ ಇಲ್ಲ ಕುಮಟಾ ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?