ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸುಳಿಮುರ್ಕಿ ಕ್ರಾಸ್ ಬಳಿ ಜ.6ರ ಮಧ್ಯರಾತ್ರಿ ಸಂಭವಿಸಿದ್ದ ಕಾರು ಬೆಂಕಿ ಅವಘಡ ಪ್ರಕರಣಕ್ಕೆ
ಬಿಗ್ ಟ್ವಿಸ್ಟ್ ಸಿಕ್ಕಿದ್ದು. ಅಪಘಾತವೆಂದು ದಾಖಲಾಗಿದ್ದ ಪ್ರಕರಣ ಪೊಲೀಸ್ ತನಿಖೆಯಿಂದ ಪೂರ್ವನಿಯೋಜಿತ ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಸಂಬಂಧ ಸಿದ್ದಾಪುರದ ಪ್ರಮೊದ್ ನಾಯ್ಕ, ಹೇಮಂತ ನಾಯ್ಕ ಹಾಗೂ ಪಿಣ್ಯಾ ನಾಯ್ಕ ಎಂಬ ಮೂವರು ಶಂಕಿತ ಆರೋಪಿತರನ್ನು ಹೊನ್ನಾವರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿತರ ವಿರುದ್ಧ ಶೀಘ್ರವೇ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿದ್ದಾಪುರದ ಸಹೋದರರಿಬ್ಬರು ಸಜೀವ ದಹನ
ಸುಳಿಮುರ್ಕಿ ಕ್ರಾಸ್ ಬಳಿ ಕಾರಿನಲ್ಲಿ ಸುಟ್ಟು ಕರಕಲಾಗಿದ್ದವರು ಸಿದ್ದಾಪುರ ಅಳವಳ್ಳಿ ಬಳಿಯ ಕುಡುಗುಂದದ ಮಂಜುನಾಥ ವೀರಭದ್ರ ಹಸ್ಲರ (35) ಹಾಗೂ ಚಂದ್ರಶೇಖರ ವೀರಭದ್ರ ಹಸ್ಲರ (30) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಮೃತ ಸಹೋದರರ ಕುಟುಂಬಸ್ಥರು, “ಇದು ಅಪಘಾತವಲ್ಲ, ಕೊಲೆ ಎಂದು ಆರೋಪಿಸಿ ತನಿಖೆ ಚುರುಕುಗೊಳಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನ  ಚುರುಕುಗೊಳಿಸಿದ್ದರು. ಹಣಕಾಸು ವ್ಯವಹಾರವೇ ಕೊಲೆಗೆ ಕಾರಣ? ಪ್ರಾಥಮಿಕ ತನಿಖೆಯ ಪ್ರಕಾರ ಮೃತ ಸಹೋದರರು ಮತ್ತು ಪ್ರಮೊದ್ ನಾಯ್ಕ ಪರಸ್ಪರ ಗೆಳೆಯರಾಗಿದ್ದರು. ವಾಹನ ಖರೀದಿ, ಮೀನು ವ್ಯಾಪಾರ ಸೇರಿದಂತೆ ಹಲವು ಹಣಕಾಸು ವ್ಯವಹಾರಗಳು ಇವರ ನಡುವೆ ನಡೆದಿದ್ದವು. ಈ ಹಣಕಾಸು ವಿಚಾರಗಳೇ  ಗಂಭೀರ ವಿವಾದಕ್ಕೆ ಕಾರಣವಾಗಿದ್ದು, ಅದೇ ಕೊಲೆಗೆ ದಾರಿ ಮಾಡಿಕೊಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ.

<span;>ಮಧ್ಯಪಾನಕ್ಕೆ ವಿಷಪ್ರಯೋಗ?
ಕೊಲೆ ಮಾಡುವ ಉದ್ದೇಶದಿಂದಲೇ ಮೃತರನ್ನು ಮಧ್ಯಪಾನಕ್ಕೆ ಆಹ್ವಾನಿಸಿ, ಮದ್ಯದಲ್ಲಿ ವಿಷ ಬೆರೆಸಿದ್ದ ಎನ್ನಲಾಗಿದೆ. ಬಳಿಕ ಅರೆಪ್ರಜ್ಞೆಯಲ್ಲಿದ್ದ ಸಹೋದರರನ್ನು ಕಾರಿನ ಹಿಂಬದಿ ಸೀಟ್‌ನಲ್ಲಿ ಹಾಕಿ, 25 ಲೀಟರ್ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

<span;>ಹೊನ್ನಾವರ ಪೊಲೀಸರ ಮಹತ್ವದ ಕಾರ್ಯಾಚರಣೆ
ದಟ್ಟ ಅರಣ್ಯ ಪ್ರದೇಶ, ಸಿಸಿ ಕ್ಯಾಮರಾ ಇಲ್ಲದ, ಮೊಬೈಲ್ ನೆಟ್ವರ್ಕ್ ಕೂಡ ಸಿಗದ ಸ್ಥಳದಲ್ಲಿ ನಡೆದ ಈ ಘಟನೆಯನ್ನು ಅಪಘಾತವೆಂದು ತೋರಿಸಲು ಆರೋಪಿತರು ಯತ್ನಿಸಿದ್ದರು. ಆದರೆ ಮೃತರ ಕುಟುಂಬದ ಆರೋಪದ ಬೆನ್ನತ್ತಿದ ಹೊನ್ನಾವರ ಪೊಲೀಸರು, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಹಾಗೂ ಭಟ್ಕಳ ಡಿವೈಎಸ್‌ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಸಿದ್ಧರಾಮೇಶ, ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದೆ.‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ/ನಡು ರಸ್ತೆಯಲ್ಲೇ ದೊಣ್ಣೆ ರಂಪಾಟ: ಪುಡಿ ರೌಡಿಗೆ ಹೆಡೆಮುರಿ ಕಟ್ಟಿದ ಕುಮಟಾ ಪೊಲೀಸರು