ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಕೈಯಿಂದ ತಮ್ಮ ಕಾರನ್ನು ತೊಳೆಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಶಾಲಾ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ ಎನ್ನಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಶಾಲೆಯ ಶಿಕ್ಷಕ ಉದಯ್ ಎಂಬವರು ತಮ್ಮ ವೈಯಕ್ತಿಕ ಕಾರನ್ನು ತೊಳೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದು, ಮಕ್ಕಳು ಪಾಠ ಸಮಯದಲ್ಲೇ ಕಾರು ಸ್ವಚ್ಛ ಮಾಡುತ್ತಿರುವ ದೃಶ್ಯಗಳನ್ನು ಸ್ಥಳೀಯ ವ್ಯಕ್ತಿಯೊಬ್ಬರು ಚಿತ್ರಿಕರಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಶಿಕ್ಷಕರು ಹಿಂದೆಯೂ ವಿದ್ಯಾರ್ಥಿಗಳಿಂದಲೇ ತಮ್ಮ ಕಾರು ತೊಳೆಯಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ವಿಷಯ ತಿಳಿಯುತ್ತಿದಂತೆ ಹಳಿಯಾಳ ಬಿಇಒ ಪ್ರಮೋದ ಮಹಾಲೆ ಅವರು ಶಾಲಾ ಮುಖ್ಯ ಶಿಕ್ಷಕರಿಂದ ವರದಿ ಕೇಳಿದ್ದಾರೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶಿಕ್ಷಣಾಲಯದಲ್ಲಿ ಮಕ್ಕಳಿಂದ ಇಂತಹ ಕೆಲಸ ಮಾಡಿಸುವುದು ನಿಯಮಬಾಹಿರವಾಗಿದ್ದು, ಈ ಪ್ರಕರಣದ ಮೇಲೆ ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ನಿಲುವಿಗೆ ಸಾರ್ವಜನಿಕರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ/ ಕರಾವಳಿ ಉತ್ಸವದ ಮೂಲಕ ಡಿಕೆ ಶಿವಕುಮಾರರಿಂದ ಮೆಚ್ಚುಗೆ ಪಡೆದ ಸಚಿವ ಮಂಕಾಳ್ ವೈದ್ಯ, ಶಾಸಕ ಸತೀಶ್ ಸೈಲ್