ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ : ರಾಜ್ಯದ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರಿಗೆ ಗೋಕರ್ಣದ ಮಹಾಗಣಪತಿ ದೇವಾಲಯದಲ್ಲಿ  ಶುಭ ಮುನ್ಸೂಚನೆ ದೊರೆತಿದೆ.

ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ಡಿಕೆಶಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಆದಷ್ಟು ಬೇಗ ರಾಜ್ಯದ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂಬ ಸಂಕಲ್ಪದೊಂದಿಗೆ ಮಹಾಗಣಪತಿಗೆ ಪ್ರಾರ್ಥನೆ ಸಲ್ಲಿಸುವ ವೇಳೆ, ದೇವಾಲಯದ ಪೂಜಾ ವಿಧಾನದ ಸಂದರ್ಭದಲ್ಲಿ ಬಲಗಡೆ ಹೂ ದೊರೆತಿದ್ದು, ಇದನ್ನು ಶುಭ ಸೂಚನೆ ಎಂದು ಭಕ್ತರು ಹಾಗೂ ಪೂಜಾರಿಗಳು ಅರ್ಥೈಸಿದ್ದಾರೆ. ಮಹಾಗಣಪತಿಗೆ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥಿಸುವಾಗಲೂ ಬಲಗಡೆ ಹೂ ಸಿಕ್ಕಿದ್ದು, ಡಿಕೆಶಿಗೆ ಸಿಎಂ ಸ್ಥಾನ ಸಿಗಲಿದೆ ಎಂಬ ಮುನ್ಸೂಚನೆ ಎಂಬ ನಂಬಿಕೆ ಮೂಡಿಸಿದೆ.

ಬಳಿಕ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ಡಿಕೆಶಿ ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿ ಐದು ಬಾರಿ ಬೇಡಿಕೆ ಇಟ್ಟಾಗಲೂ ಸತತವಾಗಿ ಒಳ್ಳೆಯ ಮುನ್ಸೂಚನೆ ದೊರೆತಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.
ಗೋಕರ್ಣದ ಮಹಾಗಣಪತಿ ಹಾಗೂ ಆಂದ್ಲೆಯ ಜಗದೀಶ್ವರಿ—ಎರಡೂ ದೇವಸ್ಥಾನಗಳಲ್ಲಿ ಡಿಕೆಶಿಗೆ ಅನುಕೂಲಕರ ಸಂಕೇತಗಳು ದೊರೆತಿರುವುದು, ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಡಿಕೆಶಿ ಸಿಎಂ ಆಗುವುದು ದೇವರ ಇಚ್ಛೆಯೇ ಎಂಬ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಮತ್ತಷ್ಟು ಬಲ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ/ಸೀಬರ್ಡ ನಿರಾಶ್ರಿತರಿಗೆ 27 ಕೋಟಿ ರೂ ಪರಿಹಾರ ಬಿಡುಗಡೆ : ರೂಪಾಲಿ ನಾಯ್ಕ ಸಂತಸ,