ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ ತಾವು ನಡೆದುಕೊಳ್ಳುತ್ತೇವೆ , ಸಿಎಂ ಸ್ಥಾನದ ಕುರಿತು ಒಪ್ಪಂದ ಆಗಿದೆ ಎಂದು ಡಿ ಸಿ ಎಂ ಡಿಕೆ ಶಿವಕುಮಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರುವ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. “ಸಿದ್ದರಾಮಯ್ಯ ಅವರು ‘ಐದು ವರ್ಷ ಸಿಎಂ ಆಗಿ ಇರಲ್ಲ’ ಎಂದು ಹೇಳಿಲ್ಲ. ಹೈಕಮಾಂಡ್ ನಿರ್ಧಾರವಾಗಿದೆ. ಹೈಕಮಾಂಡ್ ಮುಖ್ಯಮಂತ್ರಿ ಪರವಾಗಿ ಇದ್ದದ್ದರಿಂದಲೇ ಅವರು ಇಂದು ಮುಖ್ಯಮಂತ್ರಿ ಆಗಿದ್ದಾರೆ” ಎಂದು ಹೇಳಿದರು.
ಪಕ್ಷದೊಳಗಿನ ಒಪ್ಪಂದದ ಬಗ್ಗೆ ಮಾತನಾಡಿದ ಅವರು, “ನಮ್ಮಲ್ಲಿ ಒಪ್ಪಂದವಾಗಿದೆ. ಅದರಂತೆ ನಾವು ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಈ ಬಗ್ಗೆ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್ನನ್ನೂ ಸಹ ಒಪ್ಪಂದಕ್ಕೆ ತಂದಿದ್ದೇವೆ” ಎಂದು ತಿಳಿಸಿದರು. ಇದರಿಂದ ಪಕ್ಷದಲ್ಲಿ ಹರಿದಾಡುತ್ತಿರುವ ಸಿಎಂ ಬದಲಾವಣೆ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ..
ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ತಮ್ಮ ಇಚ್ಛೆ ಹಾಗೂ ಸಮಸ್ಯೆ ಪರಿಹಾರಕ್ಕೆ ದಿನಾಂಕ ನಿಗದಿ ಕುರಿತ ಪ್ರಶ್ನೆಗಳಿಗೆ ಅವರು ನೇರ ಉತ್ತರ ನೀಡದೆ, ಮುಗುಳ್ನಗೆ ಬೀರುತ್ತಲೇ ತೆರಳಿದರು. ಡಿಕೆಶಿ ಅವರ ಈ ಪ್ರತಿಕ್ರಿಯೆ, ಮುಂದಿನ ದಿನಗಳಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುವ ತೀರ್ಮಾನಗಳತ್ತ ರಾಜಕೀಯ ವಲಯದ ಗಮನ ಸೆಳೆಯುವಂತಾಗಿದೆ.
ರಾಜಕೀಯ ಹೇಳಿಕೆಗಳ ಜೊತೆಗೆ ದೇವಾಲಯ ಭೇಟಿ ಕುರಿತೂ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಇದೇ ದೇವಸ್ಥಾನಕ್ಕೆ ಬಂದು ಕುಟುಂಬಸ್ಥರ ಪರವಾಗಿ ಪ್ರಾರ್ಥನೆ ಮಾಡಿದ್ದೆ, ಅದು ಈಡೇರಿದೆ. ಇಂದು ಬಂದಿದ್ದೆನೆ, ಇನ್ನೊಂದು ತಿಂಗಳಲ್ಲಿ ಮತ್ತೆ ಇಲ್ಲಿಗೆ ಬರತ್ತೇನೆ. ತಾಯಿ ಮತ್ತೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.


