ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಹಶಿಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಬೆನ್ನಲ್ಲೇ, ಇದೀಗ ಕಾರವಾರ ತಹಶಿಲ್ದಾರ್ ಕಚೇರಿಗೂ ಅದೇ ರೀತಿಯ ಹುಸಿ ಬಾಂಬ್ ಬೆದರಿಕೆ ಸಂದೇಶ ಇಮೇಲ್ ಮೂಲಕ ರವಾನೆಯಾಗಿರುವುದು ಬೆಳಕಿಗೆ ಬಂದಿದೆ.
ಭಟ್ಕಳ ತಹಶಿಲ್ದಾರ್ ಕಚೇರಿಗೆ ಕಳುಹಿಸಲಾಗಿದ್ದ ಸಂದೇಶವನ್ನೇ ನಕಲಾಗಿ ಕಾರವಾರ ತಹಶಿಲ್ದಾರ್ ಕಚೇರಿಗೂ ಕಳುಹಿಸಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ. ಈ ಬೆದರಿಕೆ ಸಂದೇಶವು ಮೇಲ್ನೋಟಕ್ಕೆ ಹುಸಿಯೆಂದು ತೋರುತ್ತಿದ್ರೂ, ಯಾವುದೇ ಅಸಮಾಧಾನಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಹಶಿಲ್ದಾರ್ ನರೋನಾ ಅವರು ಈ ಕುರಿತು ಕಾರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಜೊತೆಗೆ ಭಟ್ಕಳ ಮತ್ತು ಕಾರವಾರ ತಹಶಿಲ್ದಾರ್ ಕಚೇರಿಗಳ ಹೊರತಾಗಿ, ಉತ್ತರ ಕನ್ನಡ ಜಿಲ್ಲೆಯ ಇತರ ಸರ್ಕಾರಿ ಕಚೇರಿಗಳಿಗೆ ಸಹ ಇಂತಹ ಇ-ಮೇಲ್ ಬೆದರಿಕೆಗಳು ಬಂದಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.
ಒಂದೇ ದಿನದಲ್ಲಿ ಎರಡು ಸರ್ಕಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಭಟ್ಕಳ ನಗರ ಪೊಲೀಸ್ ಠಾಣೆಗೆ ಕೂಡ ಎರಡು ಬಾರಿ ಬಾಂಬ್ ಬೆದರಿಕೆ ಇ-ಮೇಲ್ ಬಂದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೂ ಮರುಮರು ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಇಂತಹ ಬೆದರಿಕೆಗಳು ಬರುತ್ತಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಇದನ್ನೂ ಓದಿ/ತಹಶೀಲ್ದಾರ ಕಚೇರಿಗೆ ಹುಸಿ ಬಾಂಬ್ ಬೆದರಿಕೆ : ಶೀಘ್ರದಲ್ಲೇ ಸ್ಪೋಟಿಸುವ ಎಚ್ಚರಿಕೆ


