ಸುದ್ದಿಬಿಂದು ಬ್ಯೂರೋ ವರದಿ
ತಿರುವನಂತಪುರಂ: ಕೇರಳದಲ್ಲಿ ನೇಗೇರಿಯಾ ಫೌಲೇರಿ (Naegleria fowleri) ಸೋಂಕಿನಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಶಬರಿಮಲೆ ಯಾತ್ರಿಕರಿಗೆ ಆರೋಗ್ಯ ಇಲಾಖೆ ತುರ್ತು ಮುನ್ನೆಚ್ಚರಿಕೆ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಮಿದುಳಿಗೆ ಗಂಭೀರ ಹಾನಿ ಉಂಟುಮಾಡುವ ಈ ಅಪರೂಪದ ಆದರೆ ಮಾರಣಾಂತಿಕ ಅಮೀಬಾ ಹಾವಳಿ ಹಿನ್ನೆಲೆಯಲ್ಲಿ ಯಾತ್ರಿಕರು ವಿಶೇಷ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಬೆಚ್ಚಗಿನ ಸಿಹಿನೀರಲ್ಲಿ ಅಮೀಬಾ ಹೆಚ್ಚಾಗಿ ಪತ್ತೆ
ನೆಗೇರಿಯಾ ಫೌಲೇರಿ ಎನ್ನುವುದು ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಸಹಜವಾಗಿ ಕಂಡುಬರುವ ಸ್ವತಂತ್ರ ಅಮೀಬಾ. ನಿಂತ ನೀರು, ಕೊಳಗಳು, ಈಜುಕೊಳಗಳು ಮತ್ತು ಕೆರೆಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಹಚ್ಚಬಹುದು ಎಂದು ತಿಳಿಸಲಾಗಿದೆ.

ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಮತ್ತು ಕಲುಷಿತ ನೀರನ್ನು ಕುಡಿಯುವುದರಿಂದ ಸೋಂಕು ತಗುಲುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.‌ನೀರಿನಿಂದ ಮೂಗಿಗೆ ಸೇರಿದರೆ ಅಪಾಯ
ಅತ್ಯಂತ ವಿಷಕಾರಿ (virulent) ಸ್ವರೂಪದ ಈ ಅಮೀಬಾ ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ನೇರವಾಗಿ ಮೆದುಳಿಗೆ ತಲುಪಿ, ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್‌’ ಎನ್ನುವ ಅಪರೂಪದ ಗಂಭೀರ ರೋಗವನ್ನು ಉಂಟುಮಾಡುತ್ತದೆ.

ಶಬರಿಮಲೆ ಯಾತ್ರೆಯ ವೇಳೆ ನಿಂತ ನೀರಿನಲ್ಲಿ ಸ್ನಾನ ಮಾಡುವ ಸಂದರ್ಭಗಳಲ್ಲಿ ನೀರು ಮೂಗಿಗೆ ಒಳನುಗ್ಗದಂತೆ ಮೂಗಿನ ಕ್ಲಿಪ್‌ ಬಳಸುವುದು ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿಕೊಳ್ಳುವುದು ಅಗತ್ಯವೆಂದು ಇಲಾಖೆ ಸೂಚಿಸಿದೆ.

ನೀರಿನ ಸಂಪರ್ಕದ 1 ವಾರದ ಒಳಗೆ ಜ್ವರ, ತೀವ್ರ ತಲೆನೋವು, ವಾಂತಿ, ಕುತ್ತಿಗೆ ಬಿಗಿತ, ಗಂಟಲ, ವರ್ತನೆಯಲ್ಲಿ ಬದಲಾವಣೆಗಳು ಸೇರಿದಂತೆ ಯಾವುದೇ ಅಸಹಜ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಶಬರಿಮಲೆ ಯಾತ್ರಾ ಹಂಗಾಮಿನ ಹಿನ್ನೆಲೆಯಲ್ಲಿ, ಹೆಚ್ಚಿನ ಯಾತ್ರಿಕರು ನೈಸರ್ಗಿಕ ನೀರುಮೂಲಗಳನ್ನು ಬಳಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ/ಬೆಳಗಾವಿಯಲ್ಲಿ ಉಸಿರುಗಟ್ಟಿ ಮೂವರು ದಾರುಣ ಸಾವು :ಓರ್ವನ ಸ್ಥಿತಿ ಗಂಭೀರ