ನವದೆಹಲಿ: ನಾಳೆಯಿಂದ ಜಿಎಸ್‌ಟಿ (GST) ದರ ಕಡಿತ ಜಾರಿಗೆ ಬರಲಿದ್ದು, ಮುನ್ನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಇಂದು ಸಂಜೆ 5 ಗಂಟೆಗೆ ರಾಷ್ಟ್ರದ ಜನತೆಗೆ ಸಂದೇಶ ನೀಡಲಿದ್ದು, ಅವರು ಯಾವ ವಿಷಯದ ಕುರಿತು ಮಾತನಾಡಲಿದ್ದಾರೆ ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ನವರಾತ್ರಿ ಹಬ್ಬ ನಾಳೆಯಿಂದ ಆರಂಭವಾಗುತ್ತಿದ್ದು, ಅದೇ ದಿನದಿಂದ ಹೊಸ ಜಿಎಸ್‌ಟಿ ದರಗಳು ಜಾರಿಗೆ ಬರಲಿವೆ. ಇದರ ಪರಿಣಾಮವಾಗಿ ಅನೇಕ ಉತ್ಪನ್ನಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ದೇಶದ ಜನತೆಗೆ ಮಹತ್ವದ ಸಂದೇಶ ನೀಡಲಿದ್ದಾರೆ ಎಂದು ಊಹಿಸಲಾಗಿದೆ.

ಇದಕ್ಕೆ ಜೊತೆಗೆ, ಅಮೆರಿಕದ ಎಚ್‌1ಬಿ ವೀಸಾ ನಿಯಮಗಳಲ್ಲಿ ತರುವ ಬದಲಾವಣೆಗಳ ಕುರಿತು ಪ್ರಧಾನಿ ಮೋದಿ ಸ್ಪಷ್ಟನೆ ನೀಡುವ ಸಾಧ್ಯತೆಯೂ ಇದೆ. ಅಮೆರಿಕ ಸರ್ಕಾರ ಇತ್ತೀಚೆಗೆ ಎಚ್‌1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ಗೆ ಹೆಚ್ಚಿಸಿರುವುದಾಗಿ ಘೋಷಿಸಿದೆ. ಈ ಶುಲ್ಕವನ್ನು ಒಮ್ಮೆ ಪಾವತಿಸಬೇಕಾಗಿದ್ದು, ಈಗಾಗಲೇ ವೀಸಾ ಪಡೆದು ಅಮೆರಿಕಕ್ಕೆ ತೆರಳಿರುವವರಿಗೆ ಮರು ಶುಲ್ಕ ವಿಧಿಸಲಾಗುವುದಿಲ್ಲ.

ಅಮೆರಿಕದ ಈ ನಿರ್ಧಾರವು ಭಾರತೀಯ ಐಟಿ ವಲಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ಭಾರತ ಮತ್ತು ಅಮೆರಿಕ ನಡುವಿನ ಸುಂಕ ವಿವಾದ ಗಂಭೀರ ಸ್ಥಿತಿಗೆ ತಲುಪಿದ್ದು, ಅಮೆರಿಕ ಭಾರತದಿಂದ ಆಮದು ಮಾಡುವ ಕೆಲವು ಉತ್ಪನ್ನಗಳ ಮೇಲೆ 50% ಸುಂಕ ವಿಧಿಸಿದೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ನೀಡಲಿರುವ ಭಾಷಣ ಮಹತ್ವ ಪಡೆದಿದೆ.

  1. ಇದನ್ನೂ ಓದಿ : Gst Reforms: ನಾಳೆಯಿಂದ ಜಿಎಸ್‌ಟಿ ಕಡಿತ – ಯಾವ ವಸ್ತುಗಳ ಬೆಲೆ ತಗ್ಗಲಿದೆ..?