ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಚಿನ್ನಯ್ಯ ಕಾಣಿಸಿದ ಸ್ಥಳಗಳ ಮೊದಲ ಹಂತದ ಶೋಧಕಾರ್ಯದ ಬಳಿಕ ಇದೀಗ ಎಸ್ಐಟಿ ತಂಡ ಎರಡನೇ ಹಂತದಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಶೋಧಕಾರ್ಯ ಆರಂಭಿಸಿದ್ದು, ಭೂಮಿಯ ಮೇಲ್ಭಾಗದಲ್ಲೆ ಒಂದಿಷ್ಟು ಬುರುಡೆಗಳು,ಬಟ್ಟೆಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇದರಿಂದಾಗಿ ಧರ್ಮಸ್ಥಳ ಬುರುಡೆ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ ಎನ್ನಲಾಗಿದೆ.
ತನಿಖಾಧಿಕಾರಿ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯದಲ್ಲಿ, ಭೂಮಿ ಮೇಲ್ಭಾಗದಲ್ಲೇ ಸಣ್ಣಪುಟ್ಟ ಮೂಳೆಗಳ ತುಂಡುಗಳು ಪತ್ತೆಯಾಗಿದ್ದು, ಮಣ್ಣಿನೊಳಗೆ ಹುದುಗಿರುವ ಬಟ್ಟೆಗಳನ್ನೂ ಕೂಡ ಸಂಗ್ರಹಿಸಲಾಗಿದೆ. ಪತ್ತೆಯಾದ ಎಲ್ಲಾ ಸಾಕ್ಷ್ಯಗಳನ್ನು ಸಂರಕ್ಷಣೆಗಾಗಿ ಬಾಕ್ಸ್ಗಳಲ್ಲಿ ತುಂಬಲಾಗುತ್ತಿದೆ. ಮಣ್ಣಿನ ಮಾದರಿಗಳನ್ನೂ (ಸ್ಯಾಂಪಲ್ಗಳು) ಸಂಗ್ರಹಿಸಿ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ.
ಧರ್ಮಸ್ಥಳದಲ್ಲಿ ಮಳೆ ಸುರಿಯುತ್ತಿದ್ದರೂ ಶೋಧಕಾರ್ಯ ತಡೆ ಇಲ್ಲದೆ ಮುಂದುವರಿದಿದೆ. 11ನೇ ಸ್ಥಳದಲ್ಲಿ 50 ಕ್ಕೂ ಹೆಚ್ಚು ಎಸ್ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪಿವಿಸಿ ಪೈಪ್ಗಳು, ಮೇಣ, ಉಪ್ಪು, ಟಾರ್ಪಾಲ್ ಹಾಗೂ ಲ್ಯಾಪ್ಟಾಪ್ಗಳ ಸಹಾಯದಿಂದ ತಂಡವು ಕಾಡಿನೊಳಗೆ ಪ್ರವೇಶಿಸಿದೆ. ಹಿಂದಿನ ದಿನಗಳಲ್ಲಿ ಸ್ಥಳ ಮಹಜರಿನ ವೇಳೆ ಸಾಕಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂದು ಸೌಜನ್ಯ ಮಾವ ವಿಠಲಗೌಡ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರು. ಇದೇ ಆರೋಪವನ್ನು ತುಕಾರಾಮ ಗೌಡ ಮತ್ತು ಪುರಂದರ ಗೌಡ ಕೂಡಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆಯ 15 ಎಕರೆ ಪ್ರದೇಶದಲ್ಲಿ ಸಮಗ್ರ ಶೋಧ ನಡೆಸಲು ಎಸ್ಐಟಿ ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಿದೆ.
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡು ಪ್ರದೇಶದಲ್ಲಿ ಫೋರೆನ್ಸಿಕ್ ತಂಡ, ಸೋಕೋ ತಂಡ, ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ವಿಠಲಗೌಡ ಅವರ ಪ್ರಕಾರ, ಭೂಮಿ ಮೇಲ್ಭಾಗದಲ್ಲಿಯೇ ಐದಾರು ಮೃತದೇಹಗಳ ಅಸ್ಥಿಪಂಜರಗಳು ಪತ್ತೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದು ಉತ್ಖನನ ಕಾರ್ಯದ ಬದಲು ಮೇಲ್ಭಾಗದಲ್ಲಿರುವ ಮೂಳೆಗಳನ್ನು ಸಂಗ್ರಹಿಸುವುದಕ್ಕೆ ಒತ್ತು ನೀಡಲಾಗಿದೆ.
ಆರಂಭದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಗ್ಲೆಗುಡ್ಡೆಯಲ್ಲಿ ಸಾಕಷ್ಟು ಹೆಣಗಳಿವೆ ಎಂದು ಹೇಳಿದ್ದ. ಆದರೆ ಆತ ತೋರಿಸಿದ ಎರಡು ಕಡೆಗಳಲ್ಲಿ ಮೃತದೇಹದ ಮೂಳೆಗಳು ಪತ್ತೆಯಾದವು.ವಿಚಾರಣೆ ವೇಳೆ ಅವನ ಹೇಳಿಕೆಯಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಳ್ಳಲು ಎಸ್ಐಟಿ ಶೋಧಕಾರ್ಯ ಇನ್ನಷ್ಟು ದಿನಗಳು ಮುಂದುವರಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ಕುಮಟಾದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಮಂಕಾಳ್ ವೈದ್ಯ