ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ನಮ್ಮ ಸರಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಬಡವರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತುಂಬಾ ಅನುಕೂಲಕರ ಅಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದ್ದರು.
ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಕಿತ್ತೂರು ಚನ್ನಮ್ಮ ಉದ್ಯಾನವನದ ಹತ್ತಿರ ಹೆಗಡೆ ರಸ್ತೆ ಪಕ್ಕದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ್ದರು. ಈ ಹಿಂದೆ ನಮ್ಮ ಸರಕಾರವೇ ಅಧಿಕಾರದಲ್ಲಿ ಇದ್ದಾಗ ಯೋಜನೆ ಜಾರಿ ಮಾಡಲಾಗಿತ್ತು..ಆ ವೇಳೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿರಲಿಲ್ಲ.ನಂತರದಲ್ಲಿ ಬಂದ ಸರಕಾರ ಈ ಯೋಜನೆ ಮುಂದುವರೆಸುವಲ್ಲಿ ವಿಫಲವಾಗಿತ್ತು. ಈಗ ಮತ್ತೆ ಸರಕಾರ ಬಂದ ಬಳಿಕ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ಪುನರಾರಂಭಿಸಲಾಗಿದೆ ಎಂದರು.
“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಬರುವವರು ಹಸಿವಿನಿಂದ ಇರಬಾರದು. ಬಡವರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಸರ್ಕಾರದ ನಿಲುವಾಗಿದೆ. ಈ ವ್ಯವಸ್ಥೆಯ ಸರಿಯಾದ ಅನುಷ್ಠಾನಕ್ಕೆ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು,” ಎಂದು ಅವರು ಸೂಚಿಸಿದರು. ಇನ್ನೂ ಕ್ಯಾಂಟಿನ್ ಉದ್ಘಾಟಿಸಿದ ಸಚಿವರು ಸಾರ್ವಜನಿಕರೊಂದಿಗೆ ಊಪಹಾರ ಸೇವಿಸಿದರು.
ಕಾರ್ಯಕ್ರಮದಕ್ರಮದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರೀಯಾ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ದಿಲೀಪ್ ಶಶಿ, ಜಿಲ್ಲಾ ಉತ್ತರ ಕನ್ನಡ ಜಿಲ್ಲೆಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕುಮಟಾ ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಪುರಸಭೆ ಉಪಾಧ್ಯಕ್ಷ ಮಹೇಶ ನಾಯ್ಕ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ನಿವೇದಿತಾ ಆಳ್ವ, ಕುಮಟಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭುವನ್ ಭಾಗ್ವತ್ ಸೇರಿದಂತೆ ಅನೇಕರು ಹಾಜರಿದ್ದರು.