ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉತ್ತರ ಕನ್ನಡದ ಮನೆ ಮನಗಳನ್ನು ಶಿಕ್ಷಣದ ಮೂಲಕ ಬೆಳಗಿದ ದಿನಕರರನ್ನು ಜಿಲ್ಲೆಯ ಪ್ರತಿಯೊಬ್ಬರೂ ಸ್ಮರಿಸಿ ಕೊಳ್ಳುವ ಅಗತ್ಯವಿದೆ. ಶಿಕ್ಷಣ ಪ್ರೇಮಿ,ರಾಜಕಾರಣಿ, ಸಾಹಿತಿ, ಕಾರ್ಮಿಕ ನಾಯಕ, ಚುಟುಕು ಬ್ರಹ್ಮ ಎಂಬ ಹೆಸರಿನಿಂದ ನಾಮಾಂಕಿತರಾದ ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕಟ್ಟಾಳು ಆಗಿದ್ದರು ಎಂದು ಕವಿ, ಕಥೆಗಾರ, ಉಪನ್ಯಾಸಕ ರಮೇಶ್ ಗೌಡ ಕಡಿಮೆ ಅಭಿಪ್ರಾಯಪಟ್ಟರು.

ಅವರು ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ತಾಲ್ಲೂಕು ಘಟಕ ಧಾರೇಶ್ವರದ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಿನಕರ ದೇಸಾಯಿಯವರ ಜೀವನ ಮೌಲ್ಯ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ ಎಂ. ಎಂ. ಚಂದಾವರಕರ, ದಿನಕರ ದೇಸಾಯಿಯವರ ಛಂದಸ್ಸುಗಳ ಬಳಕೆಯ ರೀತಿ ಶ್ರೇಷ್ಠವಾದುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ್ ನಾಯ್ಕ, ದಿನಕರ ದೇಸಾಯಿಯವರ ಬದುಕಿಗು ಬರಹಕ್ಕೂ ಹತ್ತಿರದ ಸಂಬಂಧವಿದೆ, ಅವರು ಬರೆದಂತೆ ಬದುಕಿದರು. ಬದುಕಿದಂತೆ ಬರೆದರು ಎಂದು ಹೇಳಿದರು.

ವೇದಿಕೆಯಲ್ಲಿ ಎಸ್. ಬಿ. ಸಿ. ಕೋಶಾಧ್ಯಕ್ಷ ನಾಗರಾಜ ಶೇಟ, ಮುಖ್ಯ ಶಿಕ್ಷಕ ಜಗದೀಶ ಗುನಗ, ಸಾಹಿತಿ ವೆಂಕಟೇಶ್ ಬೈಲೂರ್, ಆರ್. ಎನ್. ಪಟಗಾರ ಇದ್ದರು.

ಶಿಕ್ಷಕ ಯೋಗೇಶ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೆಂಕಟೇಶ್ ವೆರ್ಣೇಕರ ಸ್ವಾಗತಿಸಿದರು.

ಇದನ್ನೂ ಓದಿ : ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು