ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾದ 450ಹಾಸಿಗೆಗಳ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶಿಥಿಲಗೊಂಡಿರುವ ಹಳೆಯ ಆಸ್ಪತ್ರೆಯಿಂದ ರೋಗಿಗಳನ್ನು ಹಂತ ಹಂತವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಕಾರವಾರ ಮೆಡಿಕಲ್ ಕಾಲೇಜಿನ ನಿರ್ದೇಶಕಿ ಡಾ. ಪೂರ್ಣಿಮಾ ಮಾಹಿತಿ ನೀಡಿದರು.
ಸೆಪ್ಟೆಂಬರ್ 8, 2025 ರಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಥರ್ಡ್ ಪಾರ್ಟಿ ಪರಿಶೀಲನೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಇದರ ಆಧಾರದ ಮೇಲೆ ಸ್ಥಳಾಂತರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಿರ್ಮಾಣ ಮತ್ತು ವೆಚ್ಚ
ಹೊಸ ಕಟ್ಟಡವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ, ಬೆಂಗಳೂರು ಮೂಲದ BSR Infratech India Limited ಕಂಪನಿಯಿಂದ ಗುತ್ತಿಗೆ ಪಡೆದು ನಿರ್ಮಾಣ ಮಾಡಲಾಗಿದೆ.ಆರಂಭಿಕ ಅಂದಾಜು 150 ಕೋಟಿ ರೂ. ಇದ್ದರೂ, ನಂತರ ಪರಿಷ್ಕೃತ ಅಂದಾಜು 198.27 ಕೋಟಿಗೆ ಏರಿಕೆಯಾಗಿದೆ.
ನೆಲಮಹಡಿ ಸೇರಿದಂತೆ ಐದು ಮಹಡಿಗಳಲ್ಲಿ ವಿಭಿನ್ನ ವಿಭಾಗಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಕಟ್ಟಡದ ವಿನ್ಯಾಸ ಮತ್ತು ವಿಭಾಗಗಳು
ನೆಲಮಹಡಿ: ಆಂಕೋಲಜಿ ವಿಭಾಗ, ರೇಡಿಯೋಥೆರಪಿ, ಟ್ರಾಮಾ ಐಸಿಯು, ಕ್ಯಾಶುವಾಲಿಟಿ ಹಾಗೂ ಎಕ್ಸ್-ರೇ ಘಟಕ
ಮೊದಲ ಮಹಡಿ: ಹೆರಿಗೆ ವಾರ್ಡ್, ಎನ್‌ಐಸಿಯು ಹಾಗೂ ಓಬಿಜಿ ವಿಭಾಗ, ಎರಡನೇ ಮಹಡಿ: ಶಸ್ತ್ರಚಿಕಿತ್ಸಾ ಕೊಠಡಿಗಳು, ಲೈಬ್ರರಿ ಮತ್ತು ಸಿಬ್ಬಂದಿ ಕೊಠಡಿಗಳು, ಮೂರನೇ ಮಹಡಿ: ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ವಾರ್ಡ್, ನಾಲ್ಕನೇ ಮಹಡಿ: ಐದು ಆಧುನಿಕ ಆಪರೇಶನ್ ಥಿಯೇಟರ್‌ಗಳು, ರಿಕವರಿ ರೂಮ್ ಹಾಗೂ ಆರ್ಥೋಪಿಡಿಕ್ ವಾರ್ಡ್
ಅತ್ಯಾಧುನಿಕ ಸೌಲಭ್ಯಗಳು, ಸಿಸಿಟಿವಿ ನಿಗಾವ್ಯವಸ್ಥೆ, ನರ್ಸ್ ಕಾಲಿಂಗ್ ಸಿಸ್ಟಂ, ಅಗ್ನಿಶಾಮಕ ವ್ಯವಸ್ಥೆ, ಯುಪಿಎಸ್ ವ್ಯವಸ್ಥೆ, ಪ್ಯಾಸೆಂಜರ್ ಲಿಫ್ಟ್, ಮ್ಯಾಡ್ಯುಲರ್ ಆಪರೇಶನ್ ಥಿಯೇಟರ್, ಮೆಡಿಕಲ್ ಗ್ಯಾಸ್ ಪೈಪ್‌ಲೈನ್, ಫಾಲ್ಸ್ ಸೀಲಿಂಗ್, ಸ್ಟ್ರಕ್ಚರಲ್ ಗ್ಲೇಜಿಂಗ್ ವ್ಯವಸ್ಥೆ, ಆಸ್ಪತ್ರೆ ನಿರ್ಮಾಣದ ಹಿನ್ನಲೆ
2019ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಡಾ. ಶರಣಪ್ರಕಾಶ ಅವರ ಮುಂದಾಳತ್ವದಲ್ಲಿ ₹150 ಕೋಟಿ ರೂ. ಅನುದಾನ ಮಂಜೂರಾಯಿತು. ಅದೇ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕ್ಯಾನ್ಸರ್ ವಿಕಿರಣ ಚಿಕಿತ್ಸಾ ಘಟಕಕ್ಕಾಗಿ ಪ್ರತ್ಯೇಕವಾಗಿ ₹5 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಯಿತು.
2020ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮರು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಯಿತು. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಾ ಕಾಮಗಾರಿ ಪೂರ್ಣಗೊಂಡಿದೆ.
ಭವಿಷ್ಯದ ಯೋಜನೆಗಳು
ಹೊಸ ಕಟ್ಟಡದಲ್ಲಿ ಎಲ್ಲಾ 450ಹಾಸಿಗೆಗಳ ವಿಭಾಗಗಳನ್ನು ಸ್ಥಳಾಂತರಿಸಿ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತದೆ. ಶಿಥಿಲಗೊಂಡ ಹಳೆಯ ಕಟ್ಟಡವನ್ನು ನೆಲಸಮ ಮಾಡಿ, ಆ ಜಾಗದಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಇನ್ನೊಂದು ಆಸ್ಪತ್ರೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದೇ ರೀತಿ, ಭವಿಷ್ಯದಲ್ಲಿ ಸೂಪರ್ ಸ್ಪೆಶಾಲಿಟಿ ವಿಭಾಗಗಳನ್ನು ಹೊಸ ಕಟ್ಟಡದಲ್ಲಿ ಸ್ಥಾಪಿಸುವ ಯೋಜನೆಯೂ ಇದೆ. ಎಲ್ಲಾ ವಿಭಾಗಗಳ ಕಾರ್ಯಾರಂಭದ ನಂತರ, ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಡಾ. ಪೂರ್ಣಿಮಾ ಹೇಳಿದರು.
ಇದನ್ನೂ ಓದಿ : ಚಿನ್ನದ ದರದಲ್ಲಿ ದಾಖಲೆ ಏರಿಕೆ : ಖರೀದಿದಾರರಿಗೆ ಶಾಕ್, ಹೂಡಿಕೆದಾರರಿಗೆ ಚಾನ್ಸ್