ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಹೊಸ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಮಾವ ವಿಠಲ ಗೌಡನೇ (Vittal Gowda) ಕೊಲೆಗೈದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna) ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಡಾ. ಅರುಣ್ ಕುಮಾರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ತಮ್ಮ ದೂರಿನಲ್ಲಿ, “ಸೌಜನ್ಯಳ ಮೇಲೆ ಸೋದರಮಾವ ವಿಠಲ ಗೌಡನ ಕೆಟ್ಟ ದೃಷ್ಟಿ ಇತ್ತು. ಅವಳನ್ನು ದೀರ್ಘಕಾಲದಿಂದ ಬಳಸಿಕೊಳ್ಳಲು ಯತ್ನಿಸುತ್ತಿದ್ದ. ಸೌಜನ್ಯ ಒಪ್ಪದ ಕಾರಣ ಅವಳ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆಗೈದಿದ್ದಾನೆ” ಎಂದು ಆರೋಪಿಸಿದ್ದಾರೆ.
ಅವರು ಮುಂದುವರಿಸಿ, “ಈ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಿದ್ದು, ಸಂಪೂರ್ಣ ಮರುತನಿಖೆ ನಡೆಯಬೇಕು. ವಿಠಲ ಗೌಡನಿಗೆ ಮಂಪರು ಪರೀಕ್ಷೆ (Narco Analysis Test) ನಡೆಸುವ ಮೂಲಕ ನಿಜಾಂಶ ಬಹಿರಂಗವಾಗಬಹುದು” ಎಂದು ಆಗ್ರಹಿಸಿದ್ದಾರೆ.
ಸೌಜನ್ಯ ತಾಯಿ ಕುಸುಮಾವತಿಯವರಿಗೂ ವಿಠಲ ಗೌಡನ ಮೇಲೆಯೇ ಸಂಶಯವಿದ್ದು, ಸೌಜನ್ಯಳ ಮೃತದೇಹವನ್ನು ನೋಡಲು ಅವರು ಹೋಗಿರಲಿಲ್ಲ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
“ಈ ಬಗ್ಗೆ ನಾನು ಹಲವು ದಿನಗಳಿಂದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇನೆ. ನ್ಯಾಯ ದೊರಕಿಸಲು ಮರುತನಿಖೆ ಅಗತ್ಯ” ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಯಲ್ಲಾಪುರದಲ್ಲಿ ಮರ ಬಿದ್ದು ಗರ್ಭಿಣಿ ಮಹಿಳೆ ಸಾವು, ಮೂವರು ಮಕ್ಕಳು ಗಂಭೀರ