ಸುದ್ದಿಬಿಂದು ಬ್ಯೂರೋ ವರದಿ
Karwar/ಕಾರವಾರ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು,ನಾರಾಯಣ ಗುರುಗಳ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ತಹಶೀಲ್ದಾರ್ ನಿಶ್ಚಲ್ ನರೋನ್ಹಾ ಉದ್ಘಾಟಿಸಿದರು.

ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ರಾಮಾ ನಾಯ್ಕ ಮಾತನಾಡಿ,ಭರತ ಖಂಡ ಕಂಡoತ ಅಪ್ರಥಮ ಸಮಾಜ ಪರಿವರ್ತಕ, ಸಮಾಜ ಸುಧಾರಕ, ಧಾರ್ಮಿಕ ಚಿಂತಕರಾದ ನಾರಾಯಣ ಗುರುಗಳು, ಒಂದೇ ಜಾತಿ ಒಂದೇ ಧರ್ಮಕ್ಕೆ ಸಿಮೀತರಾದವರಲ್ಲ ಇಡೀ ಜಗತ್ತಿನ ಮಾನವ ಕುಲಕ್ಕೆ ಗುರುಗಳು. ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದವರು.

ಅವರು ಪ್ರತಿಪಾದಿಸಿದ ತತ್ವವೆಂದರೆ ಜಗತ್ತಿನಲ್ಲಿರುವುದು, “ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು. ದೇವಾಲಯಗಳಲ್ಲಿ ತುಳಿತಕ್ಕೆ ಒಳಗಾದ ವರ್ಗದವರಿಗೆ ಪ್ರವೇಶ ಸಿಗದೇಹೋದಾಗ ರಕ್ತಕ್ರಾಂತಿ ಮಾಡದೇ ಜನರಿಗೆ ದೇವಾಲಯಗಳನ್ನು ನಿರ್ಮಿಸುತ್ತಾರೆ. ಹಿಂದುಳಿದ ವರ್ಗದವರನ್ನು ಉದ್ಯೋಗ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮೆಲೆತ್ತುವ ಕಾರ್ಯದಲ್ಲಿ ತೋಡಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಅವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ನಾರಾಯಣ ಗುರುಗಳ ತತ್ವ ಸಿದ್ದಾಂತ ಆದರ್ಶಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಉಪಾಧ್ಯಕ್ಷ ಸುನೀಲ್ ಸೋನಿ ಮಾತನಾಡಿ, “ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬುವುದು ನಾರಾಯಣ ಗುರುಗಳ ತತ್ವವಾಗಿತ್ತು. ಹಿಂದುಳಿದ ವರ್ಗದವರಿಗೆ ದೇವಾಲಯಗಳಲ್ಲಿ ಪ್ರವೇಶಕ್ಕೆ ನಿರಾಕರಿಸಿದ ಸಮಯದಲ್ಲಿ ದೇವಾಲಯಗಳನ್ನು ನಿರ್ಮಿಸಿದವರು.ಅವರ ತತ್ವ ದರ್ಶದಂತೆ ಎಲ್ಲಾ ಹಿಂದುಳಿದ ವರ್ಗದವರು ನಾವೆಲ್ಲಾ ಒಂದೇ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಾಮಾಜಿಕ ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಮತ್ತಿತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ವನಿತಾ ಶೇಟ್ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ : ಗ್ರಂಥ ಪಾಲಕನಾಗಿ ಪ್ರಜ್ವಲ್ ರೇವಣ್ಣ ನೇಮಕ